ಬೆಂಗಳೂರು: ಸಾಕಷ್ಟು ಕುತೂಹಲ ಕೆರಳಿಸಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಚನ್ನಬಸಪ್ಪ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಮಾನ್ವಿ ಮೀಸಲು ಕ್ಷೇತ್ರಕ್ಕೆ ಬಿ ವಿ ನಾಯಕ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಎಲ್ಲಾ 224 ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು ಪ್ರಕಟಿಸಿದೆ.
ಮೂರು ಪಟ್ಟಿಗಳ ಮೂಲಕ 222 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಬಿಜೆಪಿ ಬಾಕಿ ಉಳಿದಿದ್ದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಕೆ.ಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸಾಕಷ್ಟು ಹಗ್ಗ ಜಗ್ಗಾಟ ನಡೆದಿದ್ದು, ರಾಜ್ಯ ಸಮಿತಿಯಿಂದ ಎರಡನೇ ಬಾರಿ ಅಭಿಪ್ರಾಯ ಪಡೆದು ಹೈಕಮಾಂಡ್ ಹೆಸರು ಪ್ರಕಟಿಸಿದೆ.
ಈಶ್ವರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಒತ್ತಡ ಇತ್ತು, ಆದರೆ ಇದಕ್ಕೆ ಒಪ್ಪದ ಹೈಕಮಾಂಡ್ ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎನ್ನುವ ತೀರ್ಮಾನ ಪ್ರಕಟಿಸಿತ್ತು. ನಂತರ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಅವರು ಈಶ್ವರಪ್ಪ ಪುತ್ರ ಕಾಂತೇಶ್ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು.
ಪಕ್ಷದ ನಾಯಕರು ಕೂಡ ಕಚೇರಿಗೆ ಕರೆಸಿಕೊಂಡು ಮನವೊಲಿಕೆ ಮಾಡಿದರು. ನಂತರ ಆಯನೂರು ಮಂಜುನಾಥ್ ಟಿಕೆಟ್ ಗೆ ಯತ್ನಿಸಿದರು. ಆದರೆ ಯುವ ಮುಖಕ್ಕೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೆ ಸಂಘದ ಹಿನ್ನಲೆಯಲ್ಲಿ, ಸಂಘಟನಾತ್ಮಕ ಚಾತುರ್ಯ ಹೊಂದಿದ ಚನ್ನಬಸಪ್ಪಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಈ ಮೂಲಕ ಈಶ್ವರಪ್ಪ ಅವರ ಕುಟುಂಬವನ್ನು ಚುನಾವಣೆಯಿಂದ ದೂರ ಇಡಲಾಗಿದೆ, ಇನ್ನು ಕುತೂಹಲಕ್ಕೆ ಕಾರಣವಾಗಿದ್ದ ಮಾನ್ವಿ ಕ್ಷೇತ್ರದ ಟಿಕೆಟ್ ಅನ್ನು ಇವತ್ತಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಬಿ ವಿ ನಾಯಕ್ ಅವರಿಗೆ ನೀಡಲಾಗಿದೆ.