ಬೆಂಗಳೂರು: ಸಚಿವ ಸ್ಥಾನದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಅತೃಪ್ತ ನಾಯಕರು ಕುಮಾರ ಕೃಪಾ ಅತಿಥಿ ಗೃಹದತ್ತ ದೌಡಾಯಿಸುತ್ತಿದ್ದಾರೆ.
ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾದ ಕುಮಾರಕೃಪಾ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಂಗಿರುವ ಕುಮಾರ ಕೃಪ ಅತಿಥಿಗೃಹಕ್ಕೆ ವಿವಿಧ ನಾಯಕರು ಆಗಮಿಸುತ್ತಿದ್ದು, ಅರುಣ್ ಸಿಂಗ್ ಭೇಟಿಗಾಗಿ ಕಾಯುತ್ತಿದ್ದಾರೆ. ಇದೀಗ ತಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್. ನಾಗೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತಿತರರು ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದ್ದು, ಅರುಣ್ ಸಿಂಗ್ ಭೇಟಿಗಾಗಿ ತೆರಳಿದ್ದಾರೆ.
ಡಿಸಿಎಂ ಅಶ್ವತ್ಥ ನಾರಾಯಣ ಆಗಮನ
ಇಬ್ಬರು ನಾಯಕರ ಆಗಮನಕ್ಕೆ ಮುನ್ನವೇ ಕುಮಾರ ಕೃಪ ಅತಿಥಿಗೃಹಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಆಗಮಿಸಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಚರ್ಚೆ ನಡೆಸಿದ್ದಾರೆ.
ಹಲವು ಬಿಜೆಪಿ ನಾಯಕರು ಆಗಮಿಸಿ ಅರುಣ್ ಸಿಂಗ್ ಜೊತೆ ಚರ್ಚಿಸುವ ನಿರೀಕ್ಷೆ ಇದ್ದು, ಕೆಲವೇ ಕ್ಷಣಗಳಲ್ಲಿ ಅರುಣ್ ಸಿಂಗ್ ಕುಮಾರ ಕೃಪಾ ಅತಿಥಿ ಗೃಹದಿಂದ ಅರಮನೆ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ. ಅಲ್ಲಿಯವರೆಗೂ ರಾಜ್ಯ ಬಿಜೆಪಿಯ ನಾಯಕರು ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅರಮನೆ ಮೈದಾನದ ಸಭೆಗೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೆಸ್ಟ್ಹೌಸ್ಗೆ ಆಗಮಿಸುವ ನಿರೀಕ್ಷೆ ಇದೆ. ಇಬ್ಬರೂ ನಾಯಕರು ಒಟ್ಟಾಗಿ ಇಲ್ಲಿಂದ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇದೆ.
ಅರುಣ್ ಸಿಂಗ್ ತಂಗಿರುವ ಕುಮಾರ ಕೃಪ ಅತಿಥಿಗೃಹಕ್ಕೆ ಹೆಚ್ಚುವರಿ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದ್ದು, ಹಲವು ನಾಯಕರ ಆಗಮನ ಹಿನ್ನೆಲೆ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.