ಬೆಂಗಳೂರು : ಮೇ 10 ನಡೆಯಲಿರುವ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಲಿಷ್ಠ ಕೇಡರ್ ಇರುವ ಹಾಗೂ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಈಗಾಗಲೇ ಹಲವಾರು ಅಭಿಯಾನ ಮಾಡಿದ್ದು, ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದೆ. ಬೂತ್ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ, ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಚುನಾವಣೆ ಎದುರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯ ಸರ್ಕಾರಗಳಿಂದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಕೊಡಲಾಗಿದೆ. ಎಲ್ಲ ವರ್ಗದವರಿಗೂ ಕಾರ್ಯಕ್ರಮ ಕೊಟ್ಟಿದ್ದು, ಹಲವು ಅಭಿಯಾನ ಮಾಡಿದ್ದೇವೆ. ಸಂಘಟನಾತ್ಮಕ ಚಟುವಟಿಕೆ ನಡೆಯುತ್ತಿದ್ದು, ವಿಜಯ ಸಂಕಲ್ಪ, ಮೋರ್ಚಾ ಸಮಾವೇಶ ನಡೆಸಿದ್ದೇವೆ. ನಾವು ಚುನಾವಣೆ ಎದುರಿಸಲು ಸನ್ನದ್ಧ ಆಗಿದ್ದೇವೆ. 2023 ರ ಮೇ 13 ಕ್ಕೆ ಸ್ಪಷ್ಟ ಬಹುಮತ ಬಿಜೆಪಿಗೆ ಸಿಗಲಿದ್ದು, ಮತ್ತೆ ಬಿಜೆಪಿ ಆಡಳಿತ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಜನತಾ ಜನಾರ್ದನ ನಮ್ಮ ಪರ :ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಯೋಜನೆಗಳು, ಮೂಲಸೌಕರ್ಯಕ್ಕೆ ನೀಡಿರುವ ಅನುದಾನ, ರಾಜ್ಯ ಸರ್ಕಾರ ಕೈಗೊಂಡಿರುವ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು, ರೈತಾಪಿ ವರ್ಗ, ಮಹಿಳೆಯರು, ಯುವಕರು, ಎಸ್ಸಿ/ಎಸ್ಟಿ , ಒಬಿಸಿ ವರ್ಗಕ್ಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ತೆಗೆದುಕೊಂಡ ತೀರ್ಮಾನಗಳು, ಬಡವರಿಗೆ ನೀಡಿರುವ ಪ್ರೋತ್ಸಾಹ, ಗ್ರಾಮೀಣ ಪ್ರದೇಶಗಳಲ್ಲಿ ನೀಡಿರುವ ಕುಡಿಯುವ ನೀರಿನ ಯೋಜನೆ, ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯೋಜನೆ, ರೈತ ವಿದ್ಯಾ ನಿಧಿ ಯೋಜನೆಗಳನ್ನು ನೀಡಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಒಳಮೀಸಲಾತಿ ಹೆಚ್ಚಳ, ನೆನೆಗುದಿಗೆ ಬಿದ್ದ ಸಮಸ್ಯೆಗಳಿಗೆ ಪರಿಹಾರ, ಒಬಿಸಿಯಲ್ಲಿ ಬದಲಾವಣೆ ಜನಮಾನಸದಲ್ಲಿ ಪಕ್ಷ ಹಾಗೂ ಸರ್ಕಾರದ ಪರವಾಗಿ ಜನತಾ ಜನಾರ್ದನ ಇದೆ. ಈ ಬಾರಿ ನಮ್ಮ ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ ತೀರ್ಪನ್ನು ಕೇಳುತ್ತಿದ್ದೇವೆ. ಜನರ ಆಶೀರ್ವಾದ ನಮ್ಮ ಪರವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.