ಬೆಂಗಳೂರು:15 ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಸಿದ್ದವಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷ ಜಯಗಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚುನಾವಣಾ ಆಯೋಗ 15 ಸ್ಥಾನಗಳಿಗೆ ಉಪಚುನಾವಣೆ ಘೋಷಿಸಿದೆ. ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯ, ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳಲಿದೆ. ಆದರೆ ನಮ್ಮ ಪಕ್ಷ ಚುನಾವಣೆಗೆ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಎದುರಿಸಲು ಸಿದ್ಧವಿದೆ ಎಂದರು.
ಅನರ್ಹ ಶಾಸಕರ ಕೆಲ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನ ಸಹಜವಾದದ್ದು. ಯಾರೇ ಅಭ್ಯರ್ಥಿಯಾಗಲೀ ಕೆಲವೆಡೆ ಪರ-ವಿರೋಧಗಳು ಇದ್ದೇ ಇರುತ್ತವೆ. ಇವೆಲ್ಲವನ್ನು ಸರಿಪಡಿಸಿಕೊಂಡು ಪಕ್ಷ ಚುನಾವಣೆಗೆ ಸಿದ್ಧತೆ ನಡೆಸಲಿದೆ ಎಂದು ತಿಳಿಸಿದ್ರು.
ಈಗಾಗಲೇ 26 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಪಕ್ಷದ ಪರ ಅಲೆ ಇದೆ. ನಿಶ್ಚಿತವಾಗಿ ನಾವು 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದರು.
ಅನರ್ಹ ಶಾಸಕರು ಬಿಜೆಪಿ ಸರ್ಕಾರ ರಚನೆಗೆ ತ್ಯಾಗ ಮತ್ತು ಪರಿಶ್ರಮ ಹಾಕಿದ್ದು ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ರು.