ಕರ್ನಾಟಕ

karnataka

ETV Bharat / state

ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 8ರಂದು ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ: ಈರಣ್ಣ ಕಡಾಡಿ - ಈಟಿವಿ ಭಾರತ ಕನ್ನಡ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಈರಣ್ಣ ಕಡಾಡಿ
ಈರಣ್ಣ ಕಡಾಡಿ

By ETV Bharat Karnataka Team

Published : Aug 31, 2023, 8:14 PM IST

ಬೆಂಗಳೂರು: ರೈತಪರ ಯೋಜನೆಗಳ ಮುಂದುವರಿಕೆ ಮತ್ತು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ತಹಸೀಲ್ದಾರ್ ಕಚೇರಿಗಳ ಮುಂದೆ ಸೆಪ್ಟೆಂಬರ್ 8ರಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಕೊಡಬೇಕು. ಬರ ನಿರ್ವಹಣೆಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ, ಗ್ಯಾರಂಟಿ ಕಾರಣಕ್ಕಾಗಿ ರೈತಪರ ಯೋಜನೆಗಳನ್ನು ನಿಲ್ಲಿಸದಿರಿ ಎಂದರು.

ರೈತರ ಮೇಲೆ ನಿಮಗೇಕಿಷ್ಟು ದ್ವೇಷ? ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಶೇ 40ರಷ್ಟು ಮಳೆ ಕಡಿಮೆ ಆಗಿದೆ. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಕಳೆದ ವರ್ಷದ ಸಂಗ್ರಹ ಗಮನಿಸಿದರೆ ಈ ಬಾರಿ ಕಡಿಮೆ ನೀರಿದೆ. ಹರಿವು ಕೂಡ ಅತ್ಯಂತ ಕಡಿಮೆ ಇದೆ. ರೈತರ ಪಂಪ್‍ಸೆಟ್‍ಗಳಿಗೆ ಹಗಲು 7 ಗಂಟೆ ವಿದ್ಯುತ್ ಕೊಡಲಾಗುತ್ತಿತ್ತು. ಈಗ ಒಂದು ತಿಂಗಳಿನಿಂದ 4 ಗಂಟೆಯೂ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ ಎಂದು ವಿವರಿಸಿದರು.

ಅಣೆಕಟ್ಟೆಗಳ ನೀರು ಉಪಯೋಗ ಸಾಧ್ಯವಾಗಿಲ್ಲ. ಇದೆಲ್ಲದರ ಜೊತೆಗೆ ರೈತರಿಗೆ ಧೈರ್ಯ ತುಂಬಬೇಕಾದ ಸರಕಾರವು ಬಿಜೆಪಿ ಮೇಲಿನ ದ್ವೇಷದ ಕಾರಣಕ್ಕೆ ಪರೋಕ್ಷವಾಗಿ ರೈತರನ್ನು ದ್ವೇಷಿಸುತ್ತಿದೆ. ಕೇಂದ್ರ ಘೋಷಿಸಿದ ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯ ಸರಕಾರ ಕೊಡುವ 4 ಸಾವಿರ ರೂ ಹಣವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ 50 ಲಕ್ಷ ರೈತ ಕುಟುಂಬಗಳಿಗೆ ಹೊಡೆತ ಬಿದ್ದಿದೆ. 11 ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ 438 ಕೋಟಿ ರೂ. ನೀಡಿದ್ದು, ಅದೂ ಸ್ಥಗಿತವಾಗಿದೆ. ಭೂಸಿರಿ ಯೋಜನೆ ನಿಲ್ಲಿಸಿದ್ದಾರೆ ಎಂದು ದೂರಿದರು.

'ಜಿಲ್ಲಾ ಗೋಶಾಲೆ ಯೋಜನೆ ಸ್ಥಗಿತ': ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಶ್ರಮಶಕ್ತಿ ಯೋಜನೆಯಡಿ 500 ರೂಪಾಯಿ ಕೊಡುತ್ತಿದ್ದು, ಅದನ್ನು ನಿಲ್ಲಿಸಲಾಗಿದೆ. ರೈತಸಂಪದ ಯೋಜನೆ ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಜಿಲ್ಲಾ ಗೋಶಾಲೆ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ತುಷ್ಟೀಕರಣಕ್ಕಾಗಿ ಹೀಗೆ ಮಾಡಿದ್ದಾರೆ. ರೈತರ ಬೆಳೆ ಎಲ್ಲಿ ಬೇಕೋ ಅಲ್ಲಿ ಮಾರಾಟ ಮಾಡುವ ಪ್ರಯತ್ನ ಮಾಡಿದ್ದರು. ದಲ್ಲಾಳಿಗಳ ಹಿತರಕ್ಷಣೆಗೆ ಸರಕಾರ ಮುಂದಾಗುತ್ತಿದೆ ಎಂದು ಟೀಕಿಸಿದ ಅವರು, ಕೃಷಿ ಮಾಡದವರೂ ಕೃಷಿ ಜಮೀನು ಕೊಳ್ಳಲು ಅವಕಾಶ ನೀಡಿದ್ದೆವು. ಅದನ್ನೂ ಕೂಡ ತಡೆಹಿಡಿದಿದ್ದಾರೆ. ಇದರಿಂದ ರೈತರಿಗೆ ಹಾನಿಯಾಗಿದೆ. 25 ಲಕ್ಷ ಕುಟುಂಬದವರು ಹೈನುಗಾರಿಕೆ ಉಪಕಸುಬಿನಲ್ಲಿ ತೊಡಗಿದ್ದರು. ಅವರಿಗಾಗಿ ಆರಂಭಿಸಲು ಉದ್ದೇಶಿಸಿದ ಕ್ಷೀರ ಸಮೃದ್ಧಿ ಬ್ಯಾಂಕ್ ಕೂಡ ತಡೆಹಿಡಿಯಲಾಗಿದೆ. ಈ ಬ್ಯಾಂಕಿಗೆ ಸಾವಿರ ಕೋಟಿ ನೀಡಲು ಉದ್ದೇಶಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸರಕಾರ ರೈತವಿರೋಧಿ ಎನಿಸಿದೆ. ಯಾಕೆ ನೀವು ರಾಜಕಾರಣ ಮಾಡಲು ರೈತ ದ್ವೇಷಿ ಆಗಿದ್ದೀರಿ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

'ಪರಿಹಾರ ಮಾರ್ಗಸೂಚಿ ಸಡಿಲಿಕೆ': ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಕಳೆದ 100 ದಿನಗಳ ಆಡಳಿತಾವಧಿಯಲ್ಲಿ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯದಲ್ಲೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು. ಬರ ಪರಿಹಾರ ಮಾರ್ಗಸೂಚಿ ಸಡಿಲಿಕೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಇರುವ ಮಾರ್ಗಸೂಚಿಗಳು ಹಳೆಯ ಕಾಲದ್ದು. ಇದರಿಂದ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಹಾಗಾಗಿ ನಿಯಮಗಳನ್ನು ಬದಲಾವಣೆ ಮಾಡಬೇಕು ಎಂದು ಕೇಂದ್ರಕ್ಕೆ ಸಿಎಂ ಪತ್ರ ಬರೆದಿರುವುದಕ್ಕೆ ನಮ್ಮ ಸಹಮತ ಇದೆ. ಈ ಬಗ್ಗೆ ಕೇಂದ್ರದಲ್ಲಿ ನಾವೂ ಪ್ರಯತ್ನ ಮಾಡುತ್ತೇವೆ. ಸಂಬಂಧಪಟ್ಟ ಸಚಿವಾಲಯವನ್ನು ಸಂಪರ್ಕಿಸಿ ಮನವಿ ಮಾಡುತ್ತೇವೆ. ಆದರೆ ಕೇಂದ್ರದ ಮೇಲೆ ಬೊಟ್ಟುಮಾಡಿ ಸುಮ್ಮನೆ ಕೂರಬೇಡಿ. ನಿಮ್ಮ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಿ, ಹಿಂದೆ ಯಡಿಯೂರಪ್ಪ ನಿಯಮ ಮೀರಿ ಪರಿಹಾರ ನೀಡಿದ್ದರು, ಸಂಕಷ್ಟಕ್ಕೆ ಸಿಲುಕಿದ್ದ ರೈತರು ಮತ್ತು ಸಂತ್ರಸ್ತರಿಗೆ ನೆರವಾಗಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:ಯೋಗ ಕೇಂದ್ರ ಶಂಕು ಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ ಮಂಡ್ಯ ಭೇಟಿ; ಸಿಎಂ ಭೇಟಿಯಾದ ಎಲ್ ಎನ್ ಮೂರ್ತಿ

ABOUT THE AUTHOR

...view details