ETV Bharat Karnataka

ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ; ಡಿಕೆಶಿ ವಿರುದ್ಧ ಅಶ್ವತ್ಥನಾರಾಯಣ್ ವಾಗ್ದಾಳಿ - ​ ಈಟಿವಿ ಭಾರತ್​ ಕರ್ನಾಟಕ

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ.

Former Minister Ashwatthanarayan
ಮಾಜಿ ಸಚಿವ ಅಶ್ವತ್ಥನಾರಾಯಣ್
author img

By

Published : Jun 6, 2023, 3:25 PM IST

Updated : Jun 6, 2023, 3:37 PM IST

ಬೆಂಗಳೂರು :ರಾಜ್ಯದಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದರು. ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ, ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸುತ್ತಿರುವುದರ ವಿರುದ್ಧ ಬಿಜೆಪಿ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯನ್ನು ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಸರ್ಕಾರವಾಗಿದ್ದು, ಹಿಟ್ಲರ್ ಸರ್ಕಾರ ಆಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ಬಿಜೆಪಿ ಅವಧಿಯಲ್ಲಿ ಜಾರಿಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರಿಸಬೇಕು. ಎಲ್ಲರಿಗೂ ಉಚಿತವಾಗಿ 200 ಯೂನಿಟ್ ವಿದ್ಯುತ್ ಕೊಡಬೇಕು. ಮತ್ತು ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕಮಲ ನಾಯಕರು ತಮ್ಮ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥನಾರಾಯಣ್, ಕಾಂಗ್ರೆಸ್​ ಅಧಿಕಾರಕ್ಕೆ ಬಂದು ಎರಡು ವಾರ ಆಗಿಲ್ಲ. ಈಗಾಗಲೇ ಕಾಂಗ್ರೆಸ್ ನವರು ಆಕಾಶದ ಮೇಲೆ ನಡೆಯುತ್ತಿದ್ದಾರೆ. ಐದು ಗ್ಯಾರಂಟಿ ಕೊಡುವ ಭರವಸೆ ನೀಡಿ ಮಾತು ತಪ್ಪಿದ್ದಾರೆ. ಗ್ಯಾರಂಟಿಯಲ್ಲಿ ಫ್ರೀ ಕೊಡುತ್ತೇವೆ ಎಂದು ಹೇಳಿದವರು ಅದನ್ನು ಈಡೇರಿಸಿಲ್ಲ. ಉಚಿತ ವಿದ್ಯುತ್ ಎಂದು ಹೇಳಿ ಇದೀಗ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಕೊಡುಗೆ ಬೆಲೆ ಏರಿಕೆಯಾಗಿದೆ. ವಿದ್ಯುತ್ ಉತ್ಪಾದನೆ ವೆಚ್ಚ ಕಡಿಮೆ ಆದರೂ ವಿದ್ಯುತ್ ದರ ಏರಿಕೆ ಆಗುತ್ತಿದೆ. ಬೆಲೆ ಏರಿಕೆ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಬೆಲೆ ಏರಿಕೆಯಲ್ಲಿ ಡಿಕೆ ಶಿ‌ವಕುಮಾರ್​ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಕೊಡುಗೆ ಇದೆ. ಇದರ ಲಾಭ ಡಿ.ಕೆ. ಶಿವಕುಮಾರ್ ಗ್ಯಾಂಗ್​ಗೆ ಆಗುವುದು. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿಕೆಶಿ ಸೋಲಾರ್ ಯೋಜನೆಯನ್ನು ಬೇಕಾದವರಿಗೆ ಹರಾಜು ಮಾಡಿರುವ ಪರಿಣಾಮ ಇದು. ಹೀಗೆ ಜನರ ರಕ್ತ ಹೀರುವುದೇ ಕಾಂಗ್ರೆಸ್ ‌ಕೊಡುಗೆ ಆಗಿದೆ ಎಂದು ಅಶ್ವತ್ಥನಾರಾಯಣ್ ಟೀಕಿಸಿದರು.

ಇನ್ನು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯನ್ನು ಜೈಲಿಗೆ ಹಾಕುವ ಎಚ್ಚರಿಕೆ ನೀಡಿದ್ದ ಸಚಿವ ಎಂ. ಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೈಲಿಗೆ ಹಾಕುತ್ತೇನೆ ಎಂದು ಹೇಳಲು ನೀವು ಜಡ್ಜಾ? ಇದೆಲ್ಲಾ ಕರ್ನಾಟಕದಲ್ಲಿ ನಡೆಯಲ್ಲ. ನಡವಳಿಕೆಯಲ್ಲಿ ಸುಧಾರಣೆ ಆಗಬೇಕು. ಜನ ಪರವಾಗಿ ಆಡಳಿತ ಮಾಡಿದರೆ ಸಹಕಾರ ಕೊಡುತ್ತೇವೆ. ದ್ವೇಷದ ರಾಜಕಾರಣ ಮಾಡಬೇಡಿ ಎಂದರು.

ಇದೇ ವೇಳೆ ಮಾತನಾಡಿದ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಕಾಂಗ್ರೆಸ್​ ನವರು ಸಾವಿರ ಸುಳ್ಳು ಹೇಳಿ ಸರ್ಕಾರ ತಂದಿದ್ದಾರೆ. ಇನ್ನು ಮುಂದೆ ಗ್ಯಾರಂಟಿ ಅಂದರೆ ಸುಳ್ಳು ಎಂಬಂತಾಗಿದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಎನ್. ರವಿಕುಮಾರ್, ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಸಿ.ಕೆ. ರಾಮಮೂರ್ತಿ, ಸಂಸದ ಪಿ.ಸಿ. ಮೋಹನ್, ಭಾಸ್ಕರ್ ರಾವ್, ಕೇಶವ ಪ್ರಸಾದ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ‌

ಇದನ್ನೂ ಓದಿ :ರಾಜಕೀಯ ದ್ವೇಷದಿಂದ ಕಿರುಕುಳ ಆರೋಪ: ಗ್ರಾಪಂ ಸದಸ್ಯನ ಹೇಳಿಕೆ ತಳ್ಳಿ ಹಾಕಿದ ಶಾಸಕ ರಾಜು ಕಾಗೆ

Last Updated : Jun 6, 2023, 3:37 PM IST

ABOUT THE AUTHOR

...view details