ಬೆಂಗಳೂರು: ಬಹುಮತ ಕಳೆದುಕೊಂಡಿರುವ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ನ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸಿಎಂ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಬರಗಾಲವಿದೆ. ಬಹುಮತ ಇಲ್ಲದ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಚರ್ಚೆ ಬದಲು ಕಾಲಹರಣ ಮಾಡುತ್ತಿದೆ. ಹಿಂದೆ ಸಾಕಷ್ಟು ಬಾರಿ ಒಂದೇ ದಿನದಲ್ಲಿ ವಿಶ್ವಾಸಮತ ಸಾಬೀತು ಪಡಿಸಲಾಗಿದೆ. ಯಡಿಯೂರಪ್ಪ ಕೂಡ ಮೂರು ಬಾರಿ ಒಂದೇ ದಿನದಲ್ಲಿ ವಿಶ್ವಾಸಮತ ಸಾಬೀತು ಪಡಿಸಲಾಗಿದೆ. ಆದರೆ ಈಗ ಕುಮಾರಸ್ವಾಮಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಬಹುಮತ ಇಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ವಿಶ್ವಾಸಮತ ಯಾಚಿಸಬೇಕು. ಇಲ್ಲವೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ಪಕ್ಷ ಸದಸ್ಯರ ವಿರುದ್ಧ ಹರಿಹಾಯ್ದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆಯಲ್ಲಿ ಸದನವನ್ನು ಉಪಸಭಾಪತಿಗಳು ಮಧ್ಯಾಹ್ನ 3.30 ಕ್ಕೆ ಮುಂದೂಡಿಕೆ ಮಾಡಿದರು.