ಕರ್ನಾಟಕ

karnataka

ETV Bharat / state

BJP protest: ಹತ್ತು ಶಾಸಕರ ಅಮಾನತು ಖಂಡಿಸಿ ಬಿಜೆಪಿ ಸದಸ್ಯರ ಪ್ರತಿಭಟನೆ

ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆ ಬಿಜೆಪಿಯ ಹತ್ತು ಶಾಸಕರನ್ನು ಸದನ ಮುಗಿಯುವವರೆಗೆ ಅಮಾನತು ಗೊಳಿಸಲಾಗಿದೆ.

Protest by BJP members infront of Gandhi statue
ಬಿಜೆಪಿ ಸದಸ್ಯರಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

By

Published : Jul 20, 2023, 12:28 PM IST

Updated : Jul 20, 2023, 1:15 PM IST

ಬಿಜೆಪಿ ಸದಸ್ಯರಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

ಬೆಂಗಳೂರು: 10 ಜಿಜೆಪಿ ಶಾಸಕರನ್ನು ಸದನ ಮುಗಿಯುವವರೆಗೆ ಸ್ಪೀಕರ್​ ಅಮನಾತು ಮಾಡಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಮಾನತಾದ ಬಿಜೆಪಿ ಶಾಸಕರು ಸೇರಿ ಇತರೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಮುನಿರತ್ನ, ಸುರೇಶ್ ಕುಮಾರ್, ಬೈರತಿ ಬಸವರಾಜ್, ಸುನೀಲ್ ಕುಮಾರ್, ಗೋಪಾಲಯ್ಯ ಸೇರಿ ಹಲವು ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾದ್ದಾರೆ.

ಬಿಜೆಪಿ ಶಾಸಕರು ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿದರು. ಸಿದ್ದರಾಮಯ್ಯ ವಿರುದ್ಧ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಸ್ಪೀಕರ್ ಅವರಿಂದ‌ ಅನ್ಯಾಯ, ಅವಮಾನ ಎಂದು ಹೇಳುವ ಮೂಲಕ ಆಕ್ರೋಶ ಹೊರ ಹಾಕಿದರು. ಐಎಎಸ್ ಅಧಿಕಾರಿಗಳನ್ನು ಶಿಚ್ಟಾಚಾರ ಉಲ್ಲಂಘಿಸಿ ಗುಲಾಮರಂತೆ ಬಳಸಿರುವುದರ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನೆ ಸದನದಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸಲ್ಲಿಸಿದ ಹಿನ್ನೆಲೆ ಸಭಾಧ್ಯಕ್ಷ ಯು ಟಿ ಖಾದರ್​ ಅವರು ಹತ್ತು ಜನ ಬಿಜೆಪಿ ಶಾಸಕರನ್ನು ಸದನ ಮುಗಿಯುವವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ವಿಧಾನ ಪರಿಷತ್​ ಹಾಗೂ ವಿಧಾನಸಭೆ ಸದನ ಎರಡಕ್ಕೂ ಬಿಜೆಪಿ ಸದಸ್ಯರು ಗೈರಾಗಿದ್ದಾರೆ. ಅಷ್ಟೇ ಅಲ್ಲದೆ ವಿಧಾನಸಭೆ ಕಲಾಪಕ್ಕೆ ಜೆಡಿಎಸ್​ ಸದಸ್ಯರು ಕೂಡ ಗೈರಾಗಿದ್ದು, ಬಿಜೆಪಿ ಸದಸ್ಯರ ಅಮಾನತಿಗೆ ಜೆಡಿಎಸ್​ ಕೂಡ ಈ ಮೂಲಕ ಆಕ್ರೋಶ ಹೊರಹಾಕಿದೆ.

ಇಂದು ಬೆಳಗ್ಗೆ 10.30 ಕ್ಕೆ ಸದನ ಆರಂಭವಾಗಬೇಕಿತ್ತು. ಆದರೆ, ಪ್ರತಿಪಕ್ಷದ ಸದಸ್ಯರು ಬಾರದ ಹಿನ್ನೆಲೆಯಲ್ಲಿ 11.05 ಕ್ಕೆ ಸದನ ಆರಂಭವಾಯಿತು. ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು ಟಿ ಖಾದರ್ ಅವರು, ರಾಜೀವ್ ಗಾಂಧಿ ಆರೋಗ್ಯ ವಿವಿ ಸೆನೆಟ್​ಗೆ ಸದಸ್ಯರ ನಾಮನಿರ್ದೇಶನ ಮಾಡಲು ಸಭಾಧ್ಯಕ್ಷರಿಗೆ ಅಧಿಕಾರ ನೀಡುವ ಬಗ್ಗೆ ಪ್ರಸ್ತಾಪವನ್ನು ಕೈಗೆತ್ತಿಕೊಂಡರು.

ಕಾನೂನು ಸಚಿವ ಎಚ್ ಕೆ ಪಾಟೀಲ್ ಪರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಚುನಾವಣಾ ಪ್ರಸ್ತಾವವನ್ನು ಮಂಡಿಸಿದರು. ನಂತರ ಪ್ರಸ್ತಾಪವನ್ನು ಸದನ ಅಂಗೀಕರಿಸಿದತು. ಬಳಿಕ ಬಜೆಟ್ ಮೇಲಿನ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಪಾಲ್ಗೊಂಡಿದ್ದಾರೆ.

ಪ್ರತಿಭಟನೆ ವೇಳೆ ಆರಗ ಜ್ಞಾನೇಂದ್ರ ಮಾತನಾಡಿ, ಸರ್ವಾಧಿಕಾರಿ ಸಿದ್ದರಾಮಯ್ಯ ಮಾತು ಕೇಳಿ ಸಭಾಧ್ಯಕ್ಷರು ಪೀಠಕ್ಕೆ ಧಕ್ಕೆ ತಂದಿದ್ದಾರೆ. ಆಡಳಿತ ಪಕ್ಷದ ಅಣತಿಯಂತೆ ಅವರು ವರ್ತಿಸಿದ್ದಾರೆ. ಕಾಂಗ್ರೆಸ್​ನ ಸಭೆಗೆ ಸ್ಪೀಕರ್ ಹೋಗಿದ್ದಾರೆ. ತಾಜ್ ವೆಸ್ಟ್ ಎಂಡ್ ಹೊಟೇಲ್​ನ ಗೇಟ್​ನಲ್ಲಿ ಅರ್ಧ ತಾಸು ಕಾಯುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಬರ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಐಎಎಸ್ ಅಧಿಕಾರಿಗಳನ್ನು ಹೋಟೆಲ್ ಕಾಯಲು ಹಾಕಿದ್ದಾರೆ. ನಿನ್ನೆ ರಾಜಕೀಯ ಪಕ್ಷಗಳ ಕೊಲೆ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸುರೇಶ್ ಕುಮಾರ್ ಮಾತನಾಡಿ, 13 ವರ್ಷದ ಹಿಂದೆ ಡಿಸಿಎಂ ಪೇಪರ್​ಗಳನ್ನು ಸ್ಪೀಕರ್ ಮುಖಕ್ಕೆ ಬಿಸಾಕಿದ್ದರು. ಜಮೀರ್ ಖಾನ್ ಸ್ಪೀಕರ್ ಮೈಕನ್ನು ಕಿತ್ತಿದ್ದರು. ಅವರನ್ನು ಆವತ್ತು ಅಮನಾತು ಮಾಡಿರಲಿಲ್ಲ. ಐಎಎಸ್‌ ಅಧಿಕಾರಿಗಳನ್ನು ಪರಿಚಾರಕರನ್ನಾಗಿ ಮಾಡಿದ್ದಾರೆ. ಈ ಸರ್ಕಾರಕ್ಕೆ ದುರಹಂಕಾರ ಇದೆ. 10 ಜನ ಶಾಸಕರನ್ನು ಅಮಾನತು ಮಾಡಿದ್ದಾರೆ ಅವರ ಜೊತೆ ನಾವಿದ್ದೇವೆ. ಹೀಗಾಗಿ ಕಲಾಪ ಬಹಿಷ್ಕರಿಸಿದ್ದೇವೆ. ನಿನ್ನೆ ಆಗಿರುವುದು ಒಂದು ಟ್ರೇಲರ್ ಅಷ್ಟೇ ಇನ್ನು ಪಿಕ್ಚರ್ ಬಾಕಿ ಇದೆ. ರಾಜಭನಕ್ಕೆ ಪಾದಯಾತ್ರೆ ಮಾಡಿ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ ಎಂದು ತಿಳಿಸಿದರು.

ಆರ್.ಅಶೋಕ್ ಮಾತನಾಡಿ, ಕರ್ನಾಟಕ ಸಾಲಗಾರರ ರಾಜ್ಯವಾಗಿದೆ. ಸಾಲದ ಕೂಪದಲ್ಲಿದ್ದಾಗ ಈ ವೇಳೆ 30 ಜನ ಐಎಎಸ್ ಅಧಿಕಾರಿಗಳನ್ನು ಜೈಲು ಹಕ್ಕಿಗಳನ್ನು, ಅಲಿಬಾಬ ಮತ್ತು ಚಾಲಿಸ್ ಚೋರ್ ಸೇವೆಗೆ ಬಳಸಿದ್ದರು. ರಾಹುಲ್ ಗಾಂಧಿ ಎಂಪಿನಾ? ಮೇವು ಹಗರಣದ ಅಪರಾಧಿ ಲಾಲೂ ಪ್ರಸಾದ್ ಯಾದವ್, ಶಾಸಕರೇ ಅಲ್ಲದವರಿಗೂ ಪ್ರೊಟೊಕಾಲ್ ಕೊಟ್ಟಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದಿಯಾ? ದುಂದು ವೆಚ್ಚಮಾಡಲು ಪ್ರೊಟೋಕಾಲ್ ಯಾಕೆ? ಡಿಕೆಶಿ ಪೇಪರ್ ಪುಸ್ತಕ ಹರಿದು ಗೂಂಡಾಗಿರಿ ಮಾಡಿಲ್ವ?. ಜಮೀರ್ ಸ್ಪೀಕರ್ ಮೈಕ್ ಕಿತ್ತು ಹಾಕಿಲ್ವಾ? ನೀವು ಮಾಡುವುದು ಅದೇ ಕೆಲಸ, ನೀವು ನಮಗೆ ಹೇಳುತ್ತಿದ್ದೀರಾ? ಬಜೆಟ್ ಚರ್ಚೆಯಲ್ಲಿ ತಡೆ ಮಾಡುತ್ತೇವೆ ಎಂದು ನಮ್ಮನ್ನು ಹೊರಗಡೆ ಹಾಕಿದ್ದಾರೆ. ಇದು ಕಾಂಗ್ರೆಸ್​ನ ಕುತಂತ್ರವಾಗಿದೆ. ಬರಗಾಲ ಬಂದಿದೆ, ಕುಡಿಯಲು ನೀರಿಲ್ಲ, ಆದರೆ ಈ 30 ಮಂದಿ ಐಎಎಸ್ ಅಧಿಕಾರಿಗಳನ್ನು ಎರಡು ದಿನ ಇವರ ಸೇವೆ ಮಾಡುತ್ತಿದ್ದರು. ಜನರ ಸೇವೆ ಮಾಡುವುದು ಯಾರು? ಎಂದು ಪ್ರಶ್ನಿಸಿದರು.

ನಿನ್ನೆ ವಿಧಾನಸಭಾ ಕಲಾಪದ ವೇಳೆ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸಭಾಧ್ಯಕ್ಷ ಪೀಠದಲ್ಲಿ ಕುಳಿತಿರುವ ವೇಳೆ ಬಿಜೆಪಿ ಶಾಸಕರು ವಿಧೇಯಕದ ಪ್ರತಿ ಹರಿದು ಪೀಠಕ್ಕೆ ಎಸೆದು ಅಗೌರವ ತೋರಿದ್ದರು. ಈ ಹಿನ್ನೆಲೆ ಬಿಜೆಪಿಯ ಹತ್ತು ಶಾಸಕರನ್ನು ಸದನ ಮುಗಿಯುವವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ:ಸದನದ ಪೀಠಕ್ಕೆ ಅಗೌರವ: 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರಗೆ ಅಮಾನತು ಮಾಡಿ ಸ್ಪೀಕರ್ ಆದೇಶ

Last Updated : Jul 20, 2023, 1:15 PM IST

ABOUT THE AUTHOR

...view details