ಬೆಂಗಳೂರು :ರಾಜ್ಯ ಸರ್ಕಾರದ ಗ್ಯಾರಂಟಿ ಷರತ್ತು ಖಂಡಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಖಾಲಿ ಕುರ್ಚಿಗಳನ್ನು ಕಂಡು ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಗರಂ ಆದರು. ಓಡಾಡುತ್ತಿರುವವರಿಗೆ ಮೃದುವಾಗಿಯೇ ಕ್ಲಾಸ್ ತೆಗೆದುಕೊಂಡು ಕುರ್ಚಿ ಖಾಲಿ ಬಿಡದಂತೆ ತಾಕೀತು ಮಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕಂಡಿಷನ್ ಇಲ್ಲದೆ ಗ್ಯಾರಂಟಿ ಜಾರಿ ಮಾಡಲು ಆಗ್ರಹಿಸಿ ಬೆಂಗಳೂರು ಮಹಾನಗರ ಬಿಜೆಪಿ ಘಟಕಗಳ ವತಿಯಿಂದ “ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿದ್ಯುತ್ ದರ ಹೆಚ್ಚಳವನ್ನು ಯಥಾಸ್ಥಿತಿಗೆ ತರಬೇಕು, 10 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಯಥಾವತ್ ಜಾರಿ ಮಾಡಬೇಕು ಎಂದು ಆಗ್ರಹಿಸಲಾಯಿತು. ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗಳ ವಿರುದ್ಧ ಘೋಷಣೆ ಕೂಗಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ. ವಿ. ಸದಾನಂದಗೌಡ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ. ಸಿ. ನಾಗೇಶ್, ಹಾಲಪ್ಪ ಆಚಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿದ್ದರಾಜು, ಮಾಜಿ ಶಾಸಕ ಎನ್. ಮಹೇಶ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ. ಲ. ನರೇಂದ್ರ ಬಾಬು, ಮುಖಂಡರಾದ ತಾರಾ ಅನುರಾಧ, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಹೋರಾಟದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಭಾಗಿಯಾದರು. ಆದರೆ ಊಟದ ಸಮಯ ಆಗುತ್ತಿದ್ದಂತೆ ಕಾರ್ಯಕರ್ತರು ಕುರ್ಚಿ ಬಿಟ್ಟು ಅಡ್ಡಾಡಲು ಶುರು ಮಾಡಿದರು. ಕುರ್ಚಿಗಳನ್ನು ಖಾಲಿ ಬಿಟ್ಟು ಅತ್ತಿತ್ತ ಕಾರ್ಯಕರ್ತರು ಓಡಾಡುತ್ತಿದ್ದರು. ಇದನ್ನು ಕಂಡು ಅಸಮಾಧಾನಗೊಂಡ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಖುದ್ದಾಗಿ ಎದ್ದು ಮೈಕ್ ಬಳಿ ಬಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಕುರ್ಚಿ ಖಾಲಿ ಬಿಡಬೇಡಿ ಸಂಜೆವರೆಗೂ ಕುಳಿತುಕೊಂಡು ಹೋರಾಟದಲ್ಲಿ ಭಾಗಿಯಾಗಿ, ಶಾಂತ ರೀತಿಯಲ್ಲಿ ಕುಳಿತುಕೊಳ್ಳಿ, ನೀವು ಕುಳಿತಲ್ಲೇ ಭೋಜನದ ವ್ಯವಸ್ಥೆ ಆಗಲಿದೆ, ಎಲ್ಲೂ ಹೋಗಬೇಡಿ ಎಂದು ಮನವಿ ಮಾಡಿದರು.
ಬಿಎಸ್ವೈ ಎಷ್ಟೇ ಮನವಿ ಮಾಡಿದರೂ ಕಾರ್ಯಕರ್ತರು ಕುರ್ಚಿಗಳನ್ನು ಬಿಟ್ಟು ಅತ್ತಿತ್ತ ಓಡಾಟ ಮುಂದುವರೆಸಿದರು. ಊಟದ ವ್ಯವಸ್ಥೆ ಮಾಡಿರುವ ಕಡೆ ತೆರಳಿದರು. ಹಾಗಾಗಿ ಕೆಲ ನಾಯಕರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡಬೇಕಾದ ಸ್ಥಿತಿ ಎದುರಾಯಿತು.
ಸರ್ಕಾರ ಜನಪ್ರಿಯತೆಯನ್ನು ಕಳೆದುಕೊಂಡಿದೆ.. ಕೇಂದ್ರ ಸಚಿವ ಭಗವಂತ ಖೂಬಾ :ಸಿದ್ದರಾಮಯ್ಯ ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋದರೆ 40 ಸ್ಥಾನಗಳೂ ಬರಲ್ಲ. ಅಷ್ಟೊಂದು ಜನಪ್ರಿಯತೆ ಕಳೆದುಕೊಂಡಿದೆ. ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಗ್ಯಾರಂಟಿ ಜಾರಿಗೆ ಷರತ್ತು ಹಾಕಿದ ಕಾಂಗ್ರೆಸ್ನ ನಾಯಕರು ಬಂದ ಕಡೆಯಲ್ಲೆಲ್ಲಾ ಘೇರಾವ್ ಹಾಕಿ ಪ್ರತಿಭಟನೆ ಮಾಡಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕರೆ ನೀಡಿದರು.