ಬೆಂಗಳೂರು: ಸಾಲಮನ್ನಾ, ಜಿಂದಾಲ್ಗೆ 3667 ಎಕರೆ ಸರ್ಕಾರಿ ಭೂಮಿ ಮಾರಾಟ ವಿಚಾರ ಮತ್ತು ಇತರ ಬೇಡಿಕೆಗಳನ್ನು ಇಟ್ಟುಕೊಂಡು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಎರಡು ದಿನಗಳ ಅಹೋರಾತ್ರಿ ಧರಣಿಯನ್ನು ಬಿಜೆಪಿ ಆರಂಭಿಸಿದೆ.
ನಗರದ ಆನಂದ್ ರಾವ್ ಸರ್ಕಲ್ನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಹೋರಾತ್ರಿ ಧರಣಿಗೆ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಸಿ.ಟಿ ರವಿ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಶಾಸಕರು, ಸಂಸದರು,ಪರಿಷತ್ ಸದಸ್ಯರು ಭಾಗವಹಿಸಿದ್ದಾರೆ.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು, ಇದರ ವಿರುದ್ಧ ಜಿಲ್ಲೆ, ತಾಲೂಕು ಮಟ್ಟದಲ್ಲಿ ನಾವು ಹೋರಾಟ ರೂಪಿಸುತ್ತೇವೆ. ಈ ಸರ್ಕಾರ ಮನೆಗೆ ಹೋಗುವವರೆಗೂ ನಾವು ಸುಮ್ಮನಿರಲ್ಲ. ಜಿಂದಾಲ್ ಭೂಮಿ ಮಾರಾಟ ವ್ಯವಹಾರದಲ್ಲಿ ಸರ್ಕಾರದ ಪ್ರಮುಖರಿಗೆ ಸಾಕಷ್ಟು ಕಿಕ್ ಬ್ಯಾಕ್ ಬಂದಿರೋ ಅನುಮಾನವಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಎರಡು ದಿನಗಳ ಅಹೋರಾತ್ರಿ ಧರಣಿ ನಡೆಸಿ ಜಿಂದಾಲ್ಗೆ ಭೂಮಿ ಮಾರಾಟ ಮಾಡುವುದನ್ನು ಖಂಡಿಸುತ್ತಿದ್ದೇವೆ. ಆದರೆ, ನಮ್ಮ ಸಂಸದರು ದೆಹಲಿಗೆ ಹೋಗಬೇಕಾಗಿರುವ ಕಾರಣ ಭಾನುವಾರ ಸಿಎಂ ಮನೆ ಮುತ್ತಿಗೆ ಕಾರ್ಯಕ್ರಮ ಕೈಬಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಪಕ್ಷದ ಹಿರಿಯ ಮುಖಂಡ ಈಶ್ವರಪ್ಪ ಮಾತನಾಡಿ, ಈ ರಾಜ್ಯದಲ್ಲಿ ಮಾರಾಟಗಾರರ ಸರ್ಕಾರವಿದೆ. ಕಮಿಷನ್ ಸಿಕ್ಕರೆ ವಿಧಾನಸೌಧವನ್ನೇ ಮಾರಿಬಿಡುತ್ತಾರೆ. ಜಿಂದಾಲ್ಗೆ ಭೂಮಿ ಮಾರಾಟ ನಿರ್ಧಾರ ವಾಪಸ್ ಪಡೆಯುವವರಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಸಿದರು.
ಸರ್ವೇ ರಿಪೋರ್ಟ್ ಬಿಡುಗಡೆ ಮುಂದೂಡಿಕೆ:
ಎರಡು ದಿನಗಳ ಪ್ರತಿಭಟನೆ ವೇಳೆ ಸಿಎಂ ಕುಮಾರಸ್ವಾಮಿ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿಗತಿ ಕುರಿತ ಪುಸ್ತಕ ಬಿಡುಗಡೆಗೆ ಉದ್ದೇಶಿಸಿದ್ದ ಬಿಜೆಪಿ, ಇಂದು ದಿಢೀರ್ ನಿರ್ಧಾರ ಬದಲಿಸಿ ಪುಸ್ತಕ ಬಿಡುಗಡೆ ಮುಂದೂಡಿಕೆ ಮಾಡಿದೆ.
ಎಲ್ಲಿದ್ದೀಯಪ್ಪಾ:
ಬಿಜೆಪಿ ಧರಣಿಯಲ್ಲಿಯೂ ಎಲ್ಲಿದ್ದೀಯಪ್ಪಾ ಘೋಷಣೆ ಸದ್ದು ಮಾಡಿತು. ಎಲ್ಲಿದ್ದೀಯಪ್ಪಾ...ಸಿದ್ದರಾಮಯ್ಯ...ಎಲ್ಲಿದ್ದೀಯಪ್ಪಾ ತಾಜ್ ಹೊಟೇಲ್ ಕುಮಾರಸ್ವಾಮಿ..ಎಂದು ಘೋಷಣೆ ಕೂಗಿದ ಬಿಜೆಪಿ ಶಾಸಕರು,ಸಂಸದರು ಸಮ್ಮಿಶ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.