ಬೆಂಗಳೂರು:ಶಾಸಕ ಸತೀಶ್ ಜಾರಕಿಹೊಳಿಯನ್ನು ಉಚ್ಛಾಟನೆ ಮಾಡದೇ ಇದ್ದರೆ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಸಾಬೀತಾಗುತ್ತದೆ ಎಂದು ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬುಧವಾರ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹಿಂದೂ ವಿರೋಧಿ ಹೇಳಿಕೆ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷ ಮತ್ತು ಸತೀಶ್ ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗಿ ಶಾಸಕ ಸ್ಥಾನದಿಂದ ಕಿತ್ತೊಗೆಯುವಂತೆ ಆಗ್ರಹಿಸಲಾಯಿತು.
ಕಾಂಗ್ರೆಸ್ ಅಂದರೆ ಪುಂಡರ ಗುಂಪು: ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಇಂತಹ ಹೇಳಿಕೆಗಳು ಕಾಂಗ್ರೆಸ್ನಲ್ಲಿ ಹೊಸದೇನಲ್ಲ. ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ. ಇಂತಹ ಹುಚ್ಚರಿಗೆ ಅಮಾವಾಸ್ಯೆ ಹುಣ್ಣಿಮೆಯ ಹಿಂದಿನ ಮುಂದಿನ ದಿನ ಆಗಾಗ ತಲೆ ಕೆಡುತ್ತದೆ. ಹಿಂದುತ್ವವನ್ನು ಅನುಮಾನ ಪಡುವವರು ಅವರ ತಂದೆ ತಾಯಿಯನ್ನೂ ಅನುಮಾನ ಪಡುತ್ತಾರೆ.
ಕೇಸರಿ ಬಣ್ಣ ಕಂಡರೆ ಅವರು ಮೂರ್ಛೆ ಹೋಗುತ್ತಾರೆ ಹಾಗೂ ಬಿಳಿ ಟೋಪಿ ಹಾಕಿಸಿಕೊಂಡು ತಲೆ ಬಾಗುತ್ತಾರೆ. ಹಿಂದೂ ಮತ್ತು ಬೌದ್ಧ ಧರ್ಮ ಸನಾತನ ಧರ್ಮಗಳು, ಹಾಗಾದರೆ ಮಲ್ಲಿಕಾರ್ಜುನ ಖರ್ಗೆಯವರೇ ನೀವು ಹಿಂದೂ ವಿರೋಧಿಯಾಗಿದ್ದರೆ, ಬೌದ್ಧ ಧರ್ಮ ಏನು? ನಿಮ್ಮ ಹುಟ್ಟು ನಮಗೆ ಅನುಮಾನ ಕಾಡುತ್ತದೆ ಹಾಗೂ ಹಿಂದೂ ಧರ್ಮ ಅವಮಾನಕರ ಆಗಿದ್ದರೆ ನೀವು ಹುಟ್ಟಿದ್ದೆಲ್ಲಿ? ಎಂದು ವ್ಯಂಗವಾಡಿದರು.