ಬೆಂಗಳೂರು: ನಾಳೆ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ 10 ಕೆಜಿ ಅಕ್ಕಿ ವಿತರಿಸಬೇಕೆಂದು ಆಗ್ರಹಿಸಿ ಬೆಂಗಳೂರು ಸೇರಿ 10 ವಿಭಾಗ ಕೇಂದ್ರಗಳಲ್ಲಿ ನಾಳೆ ಹೋರಾಟ ನಡೆಸಲಿದ್ದೇವೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಗ್ಯಾರಂಟಿ ಗೊಂದಲ ಖಂಡಿಸಿ ಜುಲೈ 4ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಂದು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಚರ್ಚೆ ಮಾಡಿದ್ದೇವೆ. ವಿದ್ಯುತ್ ಬಿಲ್ ಹೆಚ್ಚಳ, ಠೇವಣಿ ಹೆಚ್ಚಳ, ಲೋಡ್ ಶೆಡ್ಡಿಂಗ್, ಪಠ್ಯಪುಸ್ತಕ ಏಕಾಏಕಿ ಬದಲಾವಣೆ, ಮತಾಂತರ ನಿಷೇಧ ಕಾಯ್ದೆ ರದ್ದು ಪ್ರಸ್ತಾಪ, ಗೋಹತ್ಯಾ ನಿಷೇಧ ಕಾಯ್ದೆ ಹಿಂತೆಗೆತವನ್ನು ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜುಲೈ 4ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ.
ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರಿಗೆ ಹಾಗೂ ಮಾಜಿ ಸಚಿವರಿಗೆ ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು ಸೂಚನೆಯನ್ನು ಕೊಟ್ಟಿದ್ದಾರೆ. ಸಂಸದರು ಮತ್ತು ಶಾಸಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ‘ಹೇಳಿದ್ದೇನು? ಮಾಡಿದ್ದೇನು?’ ಎಂಬ ಹೋರಾಟ ಇದಾಗಲಿದೆ. ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್ಸಿಗರು ಈಗ ಕಂಡಿಷನ್‍ಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದ ಕಂಡಿಷನ್ ಹಾಕಿದ್ದಾರೆ ಎಂದು ಟೀಕಿಸಿದರು.