ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಗ್ಯಾರಂಟಿಗಳ ಬೇಷರತ್ ಜಾರಿಗೆ ಆಗ್ರಹ: ಸದನದೊಳಗೆ ಶಾಸಕರಿಂದ, ಹೊರಗೆ ಬಿಎಸ್​ವೈ ನೇತೃತ್ವದಲ್ಲಿ ಬಿಜೆಪಿ ಹೋರಾಟ - ಬಿಜೆಪಿ ವಿಪಕ್ಷ ನಾಯಕ

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಸದನದ ಒಳಗೆ ಶಾಸಕರಿಂದ ಮತ್ತು ಸದನದ ಹೊರಗೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.

bjp
bjp

By

Published : Jul 2, 2023, 1:38 PM IST

ಬೆಂಗಳೂರು: ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತಮ್ಮ ಆಶ್ವಾಸನೆ ಈಡೇರಿಸದೆ ಮಾತಿಗೆ ತಪ್ಪಿದ್ದರಿಂದ 'ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ' ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಬಿಜೆಪಿ ತಿಳಿಸಿದೆ. ಸದನದ ಹೊರಗೆ ಬಿಎಸ್​ವೈ ನೇತೃತ್ವದಲ್ಲಿ, ಸದನದ ಒಳಗೆ ಶಾಸಕರ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯದ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಭಂಡತನ ತೋರುತ್ತಿದೆ. ಕಂಡಿಷನ್ ಇಲ್ಲದೆ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗ್ರಹಿಸಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.

ಶೇ.50ಕ್ಕಿಂತ ಹೆಚ್ಚು ವಿದ್ಯುತ್ ದರ ಏರಿಸಿದ್ದಾರೆ. ಇದರಿಂದ ಆಗುತ್ತಿರುವ ಬೆಲೆ ಏರಿಕೆಯನ್ನು ಇಳಿಸಬೇಕು. ಕೈಗಾರಿಕೆಗಳು, ಜನಸಾಮಾನ್ಯರು ವಿದ್ಯುತ್ ದರ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸರ್ಕಾರ ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಸಾಕ್ಷಿಯಾಗುತ್ತಿದೆ ಎಂದು ಆರೋಪಿಸಿದರು. ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ತಿಳಿಸಿತ್ತು. ಆದರೆ ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಇದೇ 4ರಂದು ಹೋರಾಟ ರೂಪಿಸಲಾಗುತ್ತಿದೆ ಎಂದರು.

ಸದನದ ಹೊರಗೆ ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಸದನದ ಒಳಗೆ ಶಾಸಕರ ಹೋರಾಟ ನಡೆಯಲಿದೆ. 10 ಕೆಜಿ ಅಕ್ಕಿ ಈಗ 5 ಕೆಜಿಗೆ ಬಂದಿದೆ. ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ಕೊಡಿ ಎಂದು ಆಗ್ರಹಿಸಿದರು. 200 ಯೂನಿಟ್ ಉಚಿತ ವಿದ್ಯುತ್ ಎಂದಿದ್ದರು. ಈಗ 200 ಯೂನಿಟ್ ಮಾಯವಾಗಿ 10 ತಿಂಗಳ ಸರಾಸರಿ ಮಾಡಿ ಹೆಚ್ಚುವರಿ ಶೇ 10 ಕರೆಂಟ್ ಕೊಡುತ್ತಿದ್ದಾರೆ. ಕಂಡಿಷನ್ ಇಲ್ಲದೆ 200 ಯೂನಿಟ್ ವಿದ್ಯುತ್ ಕೊಡುವಂತೆ ಒತ್ತಾಯಿಸಿದರು. ಎಲ್ಲರೂ ಇಲೆಕ್ಟ್ರಿಕ್ ಸ್ಟವ್ ಕೊಂಡುಕೊಂಡು ಕಾಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಹಿಳೆಗೆ 2 ಸಾವಿರ ರೂ. ಕೊಡುವುದಾಗಿ ಪ್ರಿಯಾಂಕ ಗಾಂಧಿ ಅವರೇ ಘೋಷಿಸಿದ್ದರು. ಈಗ ಮನೆಯೊಡತಿಗೆ ಮಾತ್ರ ಎನ್ನುವ ಮೂಲಕ ಮನೆಯಲ್ಲಿ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮಹಿಳೆಗೂ ಹಣ ಕೊಡಿ ಎಂದು ಒತ್ತಾಯಿಸಿದರು.

2022-23ರಲ್ಲಿ ಪಾಸಾಗಿ ಉದ್ಯೋಗ ಸಿಗದವರು ಮಾತ್ರ ನಿರುದ್ಯೋಗಿಗಳೇ? ಹಿಂದಿನ ನಿರುದ್ಯೋಗಿಗಳನ್ನು ಪರಿಗಣಿಸಬೇಕಲ್ಲವೇ ಎಂದು ಕೇಳಿದ ಅವರು, ಚುನಾವಣೆ ವೇಳೆ ಇದೇ ಮಾತನ್ನು ಹೇಳಿದ್ದೀರಾ ಎಂದು ಪ್ರಶ್ನಿಸಿದರು. ಶಕ್ತಿ ಯೋಜನೆಯಡಿ ಸಾಕಷ್ಟು ಬಸ್ಸುಗಳಿಲ್ಲ. ಹಲವು ರಿಪೇರಿಗೆ ಬಂದಿವೆ. ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಅನಾನುಕೂಲತೆ ಉಂಟಾಗಿದೆ. ಬೇಕಾಬಿಟ್ಟಿ ಘೋಷಣೆ ಮಾಡಿದ್ದಾರೆ. ಅವರಾಗಲೀ, ಅವರ ಕುಟುಂಬದವರಾಗಲೀ ಈ ಬಸ್‍ಗಳಲ್ಲಿ ಓಡಾಡುವುದಿಲ್ಲ ಎಂದರು.

ವಿಪಕ್ಷ ನಾಯಕನ ಆಯ್ಕೆ: ವಿಪಕ್ಷ ನಾಯಕನ ನೇಮಕಾತಿ ಶೀಘ್ರವೇ ಆಗಲಿದೆ. ಈ ವಿಚಾರದಲ್ಲಿ ಬಿಜೆಪಿಗೆ ಹೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ. ನಮ್ಮದು ಕುಟುಂಬದ ಪಕ್ಷವಲ್ಲ. ಇದು ಜನರ ಪಕ್ಷ. ಜನರ ಭಾವನೆ, ಮಿಡಿತಗಳನ್ನು ಗಮನಿಸಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ. ಅವರಲ್ಲಿ ನಿವೃತ್ತಿ ಆಗುತ್ತೇನೆ ಎಂದವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಪಕ್ಷ ನಾಯಕನ ಸ್ಥಾನಕ್ಕೆ ಯಾರೂ ಅರ್ಜಿ ಹಾಕುತ್ತಿಲ್ಲ. ಯಾಕೆಂದರೆ ಇದು ಕಾಂಗ್ರೆಸ್ ಪಕ್ಷವಲ್ಲ. ಅಂಥ ಸಂಸ್ಕೃತಿ ನಮ್ಮದಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಅವರು ಮಾಧ್ಯಮ ಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ:ಬಿಎಸ್​​ವೈಗೆ ಹೈಕಮಾಂಡ್ ಬುಲಾವ್: ನಾಳೆ ದೆಹಲಿಗೆ ಯಡಿಯೂರಪ್ಪ, ವಿಪಕ್ಷ ನಾಯಕ ಹೆಸರು ಘೋಷಣೆ ಸಾಧ್ಯತೆ

ABOUT THE AUTHOR

...view details