ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತಿಲ್ಲದೆ ಜಾರಿ ಮಾಡಬೇಕು. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು. ಜೊತೆಗೆ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು, ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು ಎಂಬಿತ್ಯಾದಿ ಗಮನಾರ್ಹ ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಧರಣಿ ನಡೆಸಿದ ಬಿಜೆಪಿಗರು, ಕಾಂಗ್ರೆಸ್ ಗ್ಯಾರಂಟಿಗಳನ್ನು ಬೇಷರತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಗ್ಯಾರಂಟಿ ಜಾರಿಗೆ ಒತ್ತಾಯಿಸಿದರು. ಗ್ಯಾರಂಟಿ ಯೋಜನೆ ಪೂರ್ಣ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿದರು.
ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುಳ್ಳು ಸಹಿ ಹಾಕಿ ಮನೆ ಮನೆಗೆ ಗ್ಯಾರಂಟಿ ಹಂಚಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ಜಾರಿಗೆ ಬಂದ 24 ಗಂಟೆಯಲ್ಲಿ ಭಾಗ್ಯಗಳ ಜಾರಿ ಎಂದು ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳೂ ತಿಂಗಳು ಕಳೆಯುತ್ತ ಬಂದರೂ ಇನ್ನೂ ಯೋಜನೆಗಳು ಜಾರಿಯಾಗಿಲ್ಲ. ಭಾಗ್ಯಗಳ ಕೊಡುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಯೋಜನೆ ಕೊಡಿ ಎಂದು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:BJP protest: ವಿಧಾನಸಭೆ ಅಧಿವೇಶನ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರ ಪ್ರತಿಭಟನೆ
ಐದು ಕೆಜಿ ಅಕ್ಕಿ ಕೇಂದ್ರ ಕೊಡುತ್ತಿದೆ. ನೀವು ನೀಡಿದ್ದ ಭರವಸೆಯಂತೆ ಕೇಂದ್ರದಿಂದ ಕೊಡುವ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡಬೇಕು. ವಿದ್ಯುತ್ ಬಿಲ್ ಜನರಿಗೆ ಹೊರೆಯಾಗಿದೆ. ಈವರೆಗೂ ಹೊಸ ಸರ್ಕಾರ ಬಂದು ತಿಂಗಳಲ್ಲೇ ಹೋರಾಟ ನಡೆದಿಲ್ಲ. ಆದರೆ ವಿದ್ಯುತ್ ಬಿಲ್ ದುಬಾರಿ ಬರುತ್ತಿದ್ದು, ಜನರು ಸಿಡಿದೆದ್ದಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ವಿದ್ಯುತ್ ಬಿಲ್ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದು ಗೋ ವಿರೋಧಿ ನೀತಿ ಮಾಡುತ್ತಿದ್ದಾರೆ. ಪಠ್ಯ ಪರಿಷ್ಕರಣೆ ಮಾಡಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸರ್ಕಾರ ಭಾಗ್ಯಗಳನ್ನು ಕೊಡಬೇಕು, ದ್ವೇಷದ ರಾಜಕಾರಣ ನಿಲ್ಲಿಸಬೇಕು. ವಿದ್ಯುತ್ ಬಿಲ್ ಕಡಿಮೆ ಮಾಡದಿದ್ದರೆ ಬೀದಿ ಬೀದಿಯಲ್ಲಿ ಹೋರಾಟ ಮಾಡುತ್ತೇವೆ. ಬಿಲ್ ಕಟ್ಟಲು ಬಿಡದೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಿನ್ನೆ ನಮ್ಮ ಕಾರ್ಯಕರ್ತ ಸಿದ್ದೇಶ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಬೇಕಾದ ಕಾರಣ ನಾನು ಹೋರಾಟದ ನಡುವೆ ಚಿತ್ರದುರ್ಗಕ್ಕೆ ತೆರಳುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ಸಿದ್ದೇಶ್ ನಿಧನಕ್ಕೆ ಸಂತಾಪ: ಹೋರಾಟ ಆರಂಭಕ್ಕೂ ಮೊದಲು ನಿನ್ನೆ ಬಿಜೆಪಿ ಸಭೆಯಲ್ಲಿ ಭಾಗಿಯಾಗಿದ್ದ ಬಳ್ಳಾರಿ ಪ್ರಭಾರಿ ಸಿದ್ದೇಶ ಯಾದವ್ ನಿಧನರಾಗಿದ್ದು, ಅವರ ನಿಧನಕ್ಕೆ ಬಿಜೆಪಿ ನಾಯಕರು ಕಾರ್ಯಕರ್ತರು ಸಂತಾಪ ಸೂಚಿಸಿದರು. ನಂತರ ಸಿದ್ದೇಶ್ ಯಾದವ್ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.
ಇದನ್ನೂ ಓದಿ:BSY: ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಆರೋಪಗಳಿಗೆ ನಮ್ಮ ಬೆಂಬಲವಿದೆ: ಬಿ ಎಸ್ ಯಡಿಯೂರಪ್ಪ