ಬೆಂಗಳೂರು :ಹಾಡಹಗಲೇ ಅಂಗಡಿಗೆ ನುಗ್ಗಿ ಟೈಲರ್ ನ ಶಿರಚ್ಛೇದ ಮಾಡಿ ದೇಶದ ಪ್ರಧಾನಿಗೆ ಬೆದರಿಕೆ ಹಾಕಿರುವ ಪ್ರಕರಣ ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಎಲ್ಲ ರಂಗಗಳಲ್ಲಿ ವಿಫಲವಾಗಿರುವ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ರಾಜಸ್ಥಾನದಲ್ಲಿ ಮೂಲಭೂತವಾದಿ ಜಿಹಾದಿ ಮಾನಸಿಕತೆಯ ವ್ಯಕ್ತಿಗಳಿಂದ ಕನ್ಹಯ್ಯ ಲಾಲ್ ಅವರ ಹತ್ಯೆ ನಡೆದಿದೆ. ಇದು ಖಂಡನೀಯ. ತನಗೆ ಜೀವ ಬೆದರಿಕೆ ಇರುವ ಬಗ್ಗೆ ಕನ್ಹಯ್ಯ ಲಾಲ್ ಪೊಲೀಸರಿಗೆ ತಿಳಿಸಿದ್ದರು. ಆದರೂ ಕನ್ಹಯ್ಯ ಅವರಿಗೆ ಪೊಲೀಸರು ರಕ್ಷಣೆ ನೀಡಿಲ್ಲ. ಈ ಹತ್ಯೆಗೆ ಪೊಲೀಸ್ ವೈಫಲ್ಯ ಮತ್ತು ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿಫಲತೆಯೇ ಕಾರಣವಾಗಿದೆ ಎಂದು ಕಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲೂ ಹಿಂದೆ ಅಲ್ಪಸಂಖ್ಯಾತರ ತುಷ್ಟಿಕರಣವನ್ನು ಮಾಡಿಕೊಂಡು ಬಂದಿತ್ತು. ಸುಮಾರು 24ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಕೊಲೆಗೆ ಕಾಂಗ್ರೆಸ್ ಪರೋಕ್ಷವಾಗಿ ಕಾರಣವಾಗಿತ್ತು. ಮತಬ್ಯಾಂಕ್ ರಾಜಕೀಯವನ್ನೇ ಬೆಂಬಲಿಸುವ ಸಿದ್ದರಾಮಯ್ಯನವರು ಈ ಕೊಲೆಗಳಿಗೆ ಬೆಂಬಲವಾಗಿ ನಿಂತು ದೇಶವಿರೋಧಿ ಸಂಘಟನೆಗಳ ಮುಖಂಡರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಿದ್ದರು. ಇದೀಗ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ನೀತಿಯನ್ನು ಬೆಂಬಲಿಸುವ ಕಾಂಗ್ರೆಸ್ಸಿಗರ ಡಿಎನ್ಎಯನ್ನು ತನ್ನದಾಗಿಸಿಕೊಂಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಮಾನಸಿಕತೆಯೇ ಇದಕ್ಕೆ ಕಾರಣ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.
ಓದಿ :ರಾಜಸ್ಥಾನ ಟೈಲರ್ ಶಿರಚ್ಛೇದ.. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪೈಶಾಚಿಕ ಕೃತ್ಯ ಎಂದ ಹೆಚ್ಡಿಕೆ