ದೊಡ್ಡಬಳ್ಳಾಪುರ:ಇಸ್ಲಾಂನಲ್ಲಿ ಜಯಂತಿ ಆಚರಣೆಗಳೇ ಇಲ್ಲ. ಇಸ್ಲಾಂ ಸಮುದಾಯದವರು ಯಾರು ಕೂಡ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿ ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ಆದರೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡುವ ಮೂಲಕ ಕೋಮು ಗಲಭೆ ಸೃಷ್ಟಿ ಮಾಡಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೊಡ್ಡಬಳ್ಳಾಪುರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿ ರದ್ಧತಿ ವಿಚಾರದ ಬಗ್ಗೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡುವ ಮೂಲಕ ಕೋಮು ಗಲಭೆ ಸೃಷ್ಟಿ ಮಾಡಿದರು. ಇದರಿಂದ ಅನೇಕ ಗಲಾಟೆಗಳಾದವು ಎಂದು ಆರೋಪಿಸಿದರು.
ಇದೇ ವೇಳೆ ಮಂಗಳೂರಿನಲ್ಲಿ ಮಂಗಳೂರು ದರ್ಶನ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಆ ಪುಸ್ತಕದಲ್ಲಿ ಟಿಪ್ಪು ಒಬ್ಬ ಮತಾಂಧ, ಕೋಮುವಾದಿ ಎಂದು ಉಲ್ಲೇಖಿಸಲಾಗಿದೆ. ಇದನ್ನು ಬಿಡುಗಡೆ ಮಾಡಿದ್ದು, ಪ್ರಿಂಟ್ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿಯಲ್ಲ. ಕಾಂಗ್ರೆಸ್ನಲ್ಲಿಯೇ ಟಿಪ್ಪು ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.
ಇನ್ನು ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಆರ್ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ರೈತರು ಭಯ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಬಿಜೆಪಿ ಸರ್ಕಾರದ 100 ದಿನದ ಸಾಧನೆ ಏನು ಇಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದು ಸರ್ಕಾರದಲ್ಲಿ ಕೇವಲ ಕೊಲೆಗಳಾಗುತ್ತಿದ್ದವು. ಆದರೆ ನಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿ, ನೆರೆಯನ್ನ ಸಮರ್ಪಕವಾಗಿ ನಿಭಾಯಿಸಿ ಶಾಂತಿ ನೆಲಸುವ ಕೆಲಸವನ್ನ ಮಾಡಿದೆ ಎಂದರು.