ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ಇಂದು ಪ್ರಗತಿ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. 135 ಪ್ರಗತಿ ರಥ ವಾಹನಗಳು 224 ವಿಧಾನಸಭೆ ಕ್ಷೇತ್ರಗಳಿಗೆ ತೆರಳಲಿದ್ದು, ಎಲ್ಇಡಿ ಪರದೆಗಳನ್ನು ಒಳಗೊಂಡ ಪ್ರಗತಿ ರಥ ವಾಹನಗಳು ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳನ್ನು ವಿಡಿಯೋ, ಆಡಿಯೋ ಮೂಲಕ ಪ್ರಚಾರ ಮಾಡಲಿವೆ.
ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಗತಿ ರಥ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಗತಿ ಯಾತ್ರೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಜನರಿಂದ ಜನರಿಗಾಗಿ ಮಾಡಿರೋ ಕಾರ್ಯಕ್ರಮ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ‘ಸಂಕಲ್ಪದಿಂದ ಸಿದ್ದಿ’ ಅಂತ ಕೆಲಸವನ್ನು ಈ ರಥ ಮಾಡಲಿದೆ. ನಾವೆಲ್ಲರೂ ಸೇರಿ ಅತ್ಯಂತ ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇವೆ. ಬೆಂಗಳೂರಿನ ಎಲ್ಲ ವಾರ್ಡ್, ಎಲ್ಲಾ ಗಲ್ಲಿಗಳಿಗೆ ಪ್ರಗತಿ ರಥ ಹೋಗಲಿದೆ. ಈ ರಥಗಳು ವಾಪಸ್ ಬರುವಾಗ ಸಿದ್ದಿಯಾಗಲಿ ಎಂದು ಅಪೇಕ್ಷಿಸುತ್ತೇವೆ ಎಂದರು.
ರಾಜ್ಯದ ಆರ್ಥಿಕ ಸ್ಥಿತಿ ಕುಸಿತ ಬಳಿಕ ಸುಧಾರಿಸುವ ಕೆಲಸ ಮಾಡಿದ್ದೇವೆ. ಕೋವಿಡ್ ಕಾಲದಲ್ಲೂ ಅಮೃತ ಕಾಲ ಮಾಡಿದ್ದೇವೆ. ಎಲ್ಲ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮಾಡಿದ್ದೇವೆ. ಬೆಂಗಳೂರಿನ ರಾಜಕಾಲುವೆಗೆ 2 ಸಾವಿರ ಕೋಟಿ ನೀಡಿದ್ದೇವೆ. ಯಾವ ಸರ್ಕಾರವು ಇಷ್ಟು ಹಣ ನೀಡಿರಲಿಲ್ಲ. ಸ್ಯಾಟಲೈಟ್ ಟೌನ್, ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ಹಣ ನೀಡಿದೆ. ರಾಜ್ಯ ಮತ್ತು ಕೇಂದ್ರ ಹಣ ನೀಡಿದ್ದರಿಂದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಬಜೆಟ್‌ನಲ್ಲಿ 7,500 ಕೋಟಿಗಳನ್ನು ಕ್ರಿಯಾ ಯೋಜನೆಗೆ ನ್ಯಾಷನಲ್ ಹೈವೆಗೆ, ಬೆಂಗಳೂರಿಗೆ, ಸಬ್ ಅರ್ಬನ್‌ಗೆ ಮೀಸಲಿಡಲಾಗಿದೆ. ರಾಜ್ಯ ಸರ್ಕಾರದಿಂದ ಇಂದು ರೈತ ವಿದ್ಯಾನಿಧಿ ರೈತರಿಗೆ ಮಾತ್ರವಲ್ಲ, ಅನೇಕ ಕಾರ್ಮಿಕ ಮಕ್ಕಳಿಗೆ ನೀಡಿದ್ದೇವೆ. ಸ್ವನಿಧಿ ಯೋಜನೆ ಮೂಲಕ ಒಂದು ಲಕ್ಷ ಯುವಕರಿಗೆ ಬ್ಯಾಂಕ್ ಗ್ಯಾರಂಟಿ ಇಲ್ಲದೇ ಸಾಲ ಸಿಕ್ಕಿದೆ ಎಂದು ಸಿಎಂ ಹೇಳಿದರು.
ಪಿಯುಸಿ ಮತ್ತು ಬೇರೆ ವಿದ್ಯಾರ್ಥಿಗಳ ಶುಲ್ಕ ಮನ್ನ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಪಾಸ್ ನೀಡುವ ಕೆಲಸ ಮಾಡಿದ್ದೇವೆ. ಪಿಯುಸಿ ಫೇಲ್ ಆದರೂ ಸ್ಟೈ ಫಂಡ್ ನೀಡುವ ಕೆಲಸ ಮಾಡಲಾಗಿದೆ. ಬಡವರ ಕಲ್ಯಾಣಕ್ಕಾಗಿ, ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ಸಮರ್ಥ ನಾಯಕತ್ವಕ್ಕೆ ಮೋದಿ ಇದ್ದಾರೆ. ಜನರ ಪರವಾಗಿ ಬಿಜೆಪಿ ಪಕ್ಷ ಇದೆ. ಜನ ಬಿಜೆಪಿಯೇ ಭರವಸೆ ಅಂತ ಹೇಳುತ್ತಿದ್ದಾರೆ. ರಥದೊಂದಿಗೆ ಹೋಗಿ ಬನ್ನಿ, ಬಿಜೆಪಿ ಪರವಾದ ಅಲೆ ರಾಜ್ಯದಲ್ಲಿ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.