ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೆ ಅಭ್ಯರ್ಥಿ ಗೆಲುವಿಗೆ ಮತಗಳ ಕೊರತೆ ಇದ್ದರೂ ಸ್ವಂತ ಶಕ್ತಿಯಿಂದ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿ ರಾಜಕೀಯ ತಂತ್ರಗಾರಿಕೆ ರೂಪಿಸತೊಡಗಿದೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆಗನುಗುಣವಾಗಿ ಆಡಳಿತ ಪಕ್ಷ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಕಾಂಗ್ರೆಸ್ ಪಕ್ಷ ಒಂದು ಸ್ಥಾನ ಗೆಲ್ಲಬಹುದಾಗಿದೆ. ನಾಲ್ಕನೇ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ಮತಗಳ ಕೊರತೆ ಎದುರಿಸುತ್ತಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ 122 ಶಾಸಕರನ್ನು (ಒಬ್ಬ ಪಕ್ಷೇತರ) ಹೊಂದಿರುವ ಬಿಜೆಪಿ ಎರಡು ಸೀಟುಗಳ ಗೆಲುವಿನ ನಂತರ 32 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಕಾಂಗ್ರೆಸ್ ಪಕ್ಷ 70 ಶಾಸಕರನ್ನು (ಒಬ್ಬ ಪಕ್ಷೇತರ) ಹೊಂದಿದ್ದು, ಒಬ್ಬ ಅಭ್ಯರ್ಥಿ ಗೆಲವಿನ ಮತ ಹೊರತುಪಡಿಸಿ ಹೆಚ್ಚುವರಿಯಾಗಿ 25 ಮತಗಳು ಉಳಿಯಲಿವೆ. ಜೆಡಿಎಸ್ 32 ಶಾಸಕರನ್ನು ಹೊಂದಿದ್ದು ಸ್ವಂತ ಶಕ್ತಿಯಿಂದ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವುದು ಕಷ್ಟವಾಗಿದೆ. ಆದರೂ, ಜೆಡಿಎಸ್ ತಮ್ನ ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಲಾಗುತ್ತದೆ ಎಂದು ಪಕ್ಷದ ಮುಖಂಡರಾದ ಮಾಜಿ ಸಿಎಂ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.
ನಾಲ್ಕನೇ ಅಭ್ಯರ್ಥಿ ಅಷ್ಟು ಸುಲಭವಾ?:ನಾಲ್ಕನೇ ಅಭ್ಯರ್ಥಿ ಗೆಲ್ಲಿಸುವಷ್ಟು ಮತಗಳು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಇಲ್ಲ. ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ನಾಲ್ಕನೇ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದಾಗಿದೆ. ಆದರೆ, ಸದ್ಯದ ಪರಿಸ್ಥಿಯಲ್ಲಿ ಯಾವುದೇ ಎರಡು ಪಕ್ಷಗಳ ಜತೆ ಹೊಂದಾಣಿಕೆ ಅಷ್ಟು ಸುಲಭವಾಗಿಲ್ಲ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪರಸ್ಪರ ಶತ್ರು ಪಕ್ಷಗಳು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಹ ಹೊಂದಿವೆ. ಇವೆರಡು ಪಕ್ಷಗಳ ನಡುವೆ ಸೀಟು ಹೊಂದಾಣಿಕೆ ಶಕ್ಯವೇ ಇಲ್ಲ. ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದರಿಂದ ಬಿಜೆಪಿಯಾಗಲಿ, ಕಾಂಗ್ರೆಸ್ಗೆ ಆಗಲಿ ಬೆಂಬಲ ನೀಡಲು ಆಸಕ್ತಿ ತೋರಿಲ್ಲ ಎಂಬುವುದು ಸ್ಪಷ್ಟ.