ಕರ್ನಾಟಕ

karnataka

By

Published : Aug 3, 2022, 5:55 PM IST

Updated : Aug 3, 2022, 7:30 PM IST

ETV Bharat / state

'ಹರ್ ಘರ್ ತಿರಂಗಾ' ಯಶಸ್ವಿಗೆ ಬಿಜೆಪಿ ಸಜ್ಜು.. 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ

ಹರ್ ಘರ್ ತಿರಂಗಾ ಕಾರ್ಯಕ್ರಮದ ಯಶಸ್ವಿಗೆ ಬಿಜೆಪಿ ತಯಾರಿ ನಡೆಸುತ್ತಿದೆ. ರಾಜ್ಯಾದ್ಯಂತ ಕನಿಷ್ಠ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವ ಗುರಿಯನ್ನು ರಾಜ್ಯ ಕೇಸರಿ ಪಡೆ ಹೊಂದಿದೆ.

BJP plan for success of Har Ghar Tiranga program
'ಹರ್ ಘರ್ ತಿರಂಗಾ' ಯಶಸ್ವಿಗೆ ಬಿಜೆಪಿ ಸಜ್ಜು

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 13ರ ಸೂರ್ಯೋದಯದಿಂದ ಆಗಸ್ಟ್ 15ರ ಸೂರ್ಯಾಸ್ತದವರೆಗೆ ರಾಜ್ಯದ ಕನಿಷ್ಠ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವ ಗುರಿಯನ್ನು ರಾಜ್ಯ ಕೇಸರಿ ಪಡೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಹರ್ ಘರ್ ತಿರಂಗಾ ಯಶಸ್ಸಿಗೆ ಬಿಜೆಪಿ ಸಜ್ಜಾಗಿದೆ.

ಯೋಜನೆ: 58 ಸಾವಿರ ಬೂತ್‌ಗಳು, 311 ಮಂಡಲಗಳು, 2,500 ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್‌ಗಳಲ್ಲಿ ಸಭೆಗಳನ್ನು ಏರ್ಪಡಿಸಿರುವ ಬಿಜೆಪಿ, ಅಗತ್ಯ ಪೂರ್ವ ತಯಾರಿ ನಡೆಸುತ್ತಿದೆ. ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದ 58 ಸಾವಿರಕ್ಕೂ ಹೆಚ್ಚಿನ ಬೂತ್‌ಗಳಲ್ಲಿ ಪಕ್ಷದ ಬೂತ್ ಸಮಿತಿಗಳ ಸಭೆ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಹಾಗೂ ಜಿಲ್ಲಾ ಮಟ್ಟಗಳಲ್ಲಿ ವಿವಿಧ ಮೋರ್ಚಾ-ಪ್ರಕೋಷ್ಠಗಳು, ಪಕ್ಷದ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಭರ್ಜರಿ ಯೋಜನೆ ರೂಪಿಸಿದೆ.

'ಹರ್ ಘರ್ ತಿರಂಗಾ' ಯಶಸ್ವಿಗೆ ಬಿಜೆಪಿ ಸಜ್ಜು

75 ಲಕ್ಷ ಮನೆಗಳ ಗುರಿ: ಹರ್ ಘರ್ ತಿರಂಗಾ ಅಭಿಯಾನದಲ್ಲಿ ಕರ್ನಾಟಕದ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಬೇಕು ಎನ್ನುವುದು ರಾಜ್ಯ ಬಿಜೆಪಿಯ ಗುರಿಯಾಗಿದೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 35,000 ಮನೆಗಳ ಮೇಲೆ ಧ್ವಜ ಹಾರಿಸುವ ಮೂಲಕ ಟಾರ್ಗೆಟ್ ರೀಚ್ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಬೃಹತ್ ತ್ರಿವರ್ಣ ಧ್ವಜ ಯಾತ್ರೆ:75 ತಾಲೂಕು ಕೇಂದ್ರಗಳಲ್ಲಿ ಬೃಹತ್ ತ್ರಿವರ್ಣ ಧ್ವಜ ಯಾತ್ರೆ ನೆರವೇರಲಿದೆ. 175 ಕಡೆಗಳಲ್ಲಿ ಸೈಕಲ್ ಜಾಥಾ / ಬೈಕ್ ಜಾಥಾವನ್ನು ಯುವ ಮೋರ್ಚಾ ವತಿಯಿಂದ ನಡೆಸಲಾಗುವುದು. ರೈತ ಮೋರ್ಚಾ ವತಿಯಿಂದ 75 ಕಡೆಗಳಲ್ಲಿ ಅಲಂಕೃತ ಎತ್ತಿನ ಬಂಡಿಯಲ್ಲಿ ತ್ರಿವರ್ಣ ಧ್ವಜಯಾತ್ರೆ ನಡೆಯಲಿದೆ. ಮಹಿಳಾ ಮೋರ್ಚಾ ನೇತೃತ್ವದಲ್ಲಿ 175 ಕಡೆಗಳಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಮತ್ತಿತರರ ಭಾವಚಿತ್ರದೊಂದಿಗೆ ತ್ರಿವರ್ಣ ಧ್ವಜದ ಮಹಿಳಾ ಜಾಥಾ ಏರ್ಪಡಿಸಲಿದೆ.

ವಿಶೇಷವಾಗಿ ಬೆಳಗಾವಿ, ಚಿತ್ರದುರ್ಗ, ವಿದುರಾಶ್ವತ್ಥ, ಮಂಗಳೂರು, ಕಲಬುರಗಿಯ ಸುರಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ತಮಟೆ ಮತ್ತಿತರೆ ವಾದ್ಯಗಳ ನಾದದೊಂದಿಗೆ ಬೃಹತ್ ತ್ರಿವರ್ಣ ಧ್ವಜ ಯಾತ್ರೆ ನಡೆಯಲಿದೆ. ಜೊತೆಗೆ ಈ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಗಳ ಮನೆಗಳನ್ನು ಭೇಟಿ ಮಾಡುವ ಅಭಿಯಾನವೂ ನಡೆಯಲಿದೆ.

ಧ್ವಜ ಪೂರೈಕೆಗೆ ಸ್ಟಾಲ್ ನಿರ್ಮಾಣ: ಕನಿಷ್ಠ 75 ಲಕ್ಷ ಮನೆಗಳ ಮೇಲೆ ಧ್ವಜ ಹಾರಿಸಬೇಕು ಎಂದರೆ ಒಂದು ಕೋಟಿಗೂ ಹೆಚ್ಚಿನ ಧ್ವಜಗಳ ಅಗತ್ಯವಿದೆ. ಅಷ್ಟು ಪ್ರಮಾಣದ ಧ್ವಜಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಬಿಜೆಪಿಯೇ ಧ್ವಜದ ಮಳಿಗೆ ತೆರೆದು ಅಭಿಯಾನ ಆರಂಭವಾಗುವರೆಗೂ ಧ್ವಜಗಳ ಮಾರಾಟ ಮಾಡಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳಲ್ಲೂ ಧ್ವಜಗಳ ಮಾರಾಟಕ್ಕೆ ಮಳಿಗೆ ತೆರೆದಿದ್ದು, 25 ರೂಪಾಯಿಗೆ ಒಂದು ಧ್ವಜ ಮಾರಾಟ ಮಾಡುತ್ತಿದೆ. ಧ್ವಜ ಖರೀದಿಗೆ ಬರುವ ಜನರಿಗೆ ಯಾವಾಗ ಧ್ವಜ ಹಾರಿಸಬೇಕು, ಯಾವಾಗ ಧ್ವಜ ಇಳಿಸಬೇಕು ಎನ್ನುವ ಮಾಹಿತಿಯನ್ನು ನೀಡಿ ಧ್ವಜ ನೀಡಲಾಗುತ್ತಿದೆ.

ಇದನ್ನೂ ಓದಿ:ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದಲ್ಲಿ 'ಭಾಗ್ಯ' ಯೋಜನೆಗಳನ್ನು ಕೊಡುತ್ತೇವೆ: ರಾಹುಲ್​ ಗಾಂಧಿ ಭರವಸೆ

ಮಳಿಗೆಯಲ್ಲಿ ಧ್ವಜ ಮಾರಾಟ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬಿಜೆಪಿ ಕಾರ್ಯಕರ್ತೆ ಸವಿತಾ, ಕೇವಲ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೇ ಸಾರ್ವಜನಿಕರು ಬಂದು ಬಿಜೆಪಿ ಕಚೇರಿಯ ಮಳಿಗೆಯಲ್ಲಿ ಧ್ವಜ ಖರೀದಿ ಮಾಡಬಹುದಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರು ಉಡುಗೊರೆಯಾಗಿ ನೀಡಲು ತೆಗೆದುಕೊಂಡು ಹೋಗುತ್ತಿದ್ದಾರೆ. ಮಾಧ್ಯಮಗಳಲ್ಲಿ ನೋಡಿಯೂ ಖರೀದಿಗೆ ಬರುತ್ತಿದ್ದಾರೆ. ಖರೀದಿ ಕುರಿತು ಹೆಸರು ದಾಖಲು ಮಾಡಿಕೊಳ್ಳುತ್ತಿದ್ದೇವೆ. ಕೊರಿಯರ್ ಮೂಲಕವೂ ಧ್ವಜಗಳನ್ನು ಕಳುಹಿಸುತ್ತಿದ್ದೇವೆ ಎಂದರು. ಆಗಸ್ಟ್ 12 ರವರೆಗೂ ಮಳಿಗೆಯಲ್ಲಿ ಧ್ವಜಗಳ ಮಾರಾಟ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

Last Updated : Aug 3, 2022, 7:30 PM IST

ABOUT THE AUTHOR

...view details