ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮಾಸ್ಟರ್ ಪ್ಲಾನ್ ರೂಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಓರ್ವ ಸಂಸದ, ಓರ್ವ ಕೋರ್ ಕಮಿಟಿ ಸದಸ್ಯ ಮತ್ತು ಓರ್ವ ಪದಾಧಿಕಾರಿಯನ್ನು ಒಳಗೊಂಡ ಮೂವರ ಸಮಿತಿಯನ್ನು ಪ್ರತಿ ಎರಡು ಜಿಲ್ಲೆಗೆ ರಚಿಸಿ ಆಕಾಂಕ್ಷಿಗಳ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೊಂದಿಗೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಆಕಾಂಕ್ಷಿಗಳ ಪಟ್ಟಿ ನೀಡುವಂತೆ ರಾಜ್ಯ ಸಮಿತಿಗೆ ಸೂಚನೆ ನೀಡಿದ್ದಾರೆ. ಆ ಮೂಲಕ ಟಿಕೆಟ್ ಹಂಚಿಕೆ ಅಧಿಕಾರವನ್ನು ನೇರವಾಗಿ ಹೈಕಮಾಂಡ್ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಕಳೆದ ರಾತ್ರಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ವಿಚಾರದ ಕುರಿತು ಚರ್ಚೆ ನಡೆಸುವುದಕ್ಕೆ ನಿರಾಕರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಟಿಕೆಟ್ ಗೆ ಸಮಿತಿ ರಚನೆ ಮಾಡಿ, ಒಬ್ಬ ಸಂಸದ, ಒಬ್ಬ ಕೋರ್ ಕಮಿಟಿ ಸದಸ್ಯ ಒಬ್ಬ ಪದಾಧಿಕಾರಿ ಮೂವರ ಸಮಿತಿ ರಚಿಸಿ ಇವರಿಗೆ ಎರಡು ಜಿಲ್ಲೆಯ ಜವಾಬ್ದಾರಿ ಹಂಚಿಕೆ ಮಾಡಿ, ತಮ್ಮದೇ ಜಿಲ್ಲೆಯ ಸಂಸದರಿಗೆ ಅದೇ ಜಿಲ್ಲೆ ನೀಡಬೇಡಿ. ಪ್ರತಿ ತಂಡ ಎರಡು ಬೇರೆ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಪಡೆಯಬೇಕು.
ಈ ತಿಂಗಳ 31 ಕ್ಕೆ ಸಮಿತಿ ಅಭಿಪ್ರಾಯ ಪಡೆದು ಕೇಂದ್ರಕ್ಕೆ ವರದಿ ನೀಡಬೇಕು. ಆಕಾಂಕ್ಷಿಗಳು ಎಷ್ಟು ಜನ ಇದ್ದಾರೆ, ಹಾಲಿ ಶಾಸಕರ ಬಗ್ಗೆ ಏನು ಅಭಿಪ್ರಾಯ? ಟಿಕೆಟ್ ಬದಲಾವಣೆ ಮಾಡಬೇಕಾ? ಹೊಸಬರಿಗೆ ಅವಕಾಶ ನೀಡಬೇಕಾ? ಯಾವ ಆಕಾಂಕ್ಷಿಗಳ ಪರ ಹೆಚ್ಚು ಒಲವಿದೆ? ಒಂದೇ ದಿನದಲ್ಲಿ ಈ ಕೆಲಸ ಮಾಡಿ. ಕ್ಷೇತ್ರದ ಆಕಾಂಕ್ಷಿಗಳು, ಪದಾಧಿಕಾರಿಗಳು, ಶಾಸಕರು, ಸಂಸದರು, ಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ನೇರವಾಗಿ ಕೇಂದ್ರಕ್ಕೆ ಈ ವರದಿ ನೀಡಿ. ಬಳಿಕ ಟಿಕೆಟ್ ಯಾರಿಗೆ ಅನ್ನೋದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದು ಸಭೆಯಲ್ಲಿ ಅಮಿತ್ ಶಾ ಸೂಚನೆ ನೀಡಿದರು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಮಾಹಿತಿ ಸಿಕ್ಕಿದೆ.
ಈ ಹಿಂದೆ ಜಿಲ್ಲಾ ಸಮಿತಿಗಳಿಂದ ಆಕಾಂಕ್ಷಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗಿತ್ತು. ಆ ಪಟ್ಟಿಯ ಆಧಾರವಾಗಿ ಕೋರ್ ಕಮಿಟಿಯಲ್ಲಿ ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಅಮಿತ್ ಶಾ ಈ ಬಾರಿ ಜಿಲ್ಲಾ ಸಮಿತಿ ನೀಡಿದ ಪಟ್ಟಿಯ ಬದಲು ಹೊಸದಾಗಿ ಸಮಿತಿ ರಚಿಸಿ ಆ ಸಮಿತಿಯಿಂದ ಪಟ್ಟಿ ತರಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಬಿಜೆಪಿಯ ಮೊದಲ ಪಟ್ಟಿ ಚುನಾವಣಾ ದಿನಾಂಕ ಘೋಷಣೆಯಾದ ನಂತರವೇ ಬಿಡುಗಡೆಯಾಗಲಿದೆ.
ಇನ್ನು, ಕೋರ್ ಕಮಿಟಿ ಸಭೆಯಲ್ಲಿ ಮೋರ್ಚಾಗಳ ಸಮಾವೇಶ, ರಥಯಾತ್ರೆ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲ್ಲಿಕೆ ಮಾಡಿದರು. ಅಲ್ಲದೆ ಈ ಎಲ್ಲಾ ಕಾರ್ಯಕ್ರಮಗಳಿಂದಾಗಿ ಪಕ್ಷಕ್ಕೆ ಲಾಭ ಆಗಿದೆ ಪಕ್ಷದ ಸಂಘಟನೆಗೂ ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ ಎಂದರು. ನಂತರ ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತ ಸರ್ಕಾರದ ತೀರ್ಮಾನದಿಂದ ಲಾಭವಾಗಲಿದೆ. ಒಳಮೀಸಲಾತಿ ಲಾಭ ನೇರವಾಗಿ ಚುನಾವಣೆ ಮೇಲೆ ಆಗಲಿದೆ ಎಂದರು.