ಬೆಂಗಳೂರು: 2013ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ, ತಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರ್ರನ್ನು ಉಪಾಯದಿಂದ ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ದೂರ ಸರಿಸಿದಿರಿ. ಈಗ ಹಿಂದ ಎಂಬ ನಾಟಕ ಚೆನ್ನಾಗಿದೆ ಎಂದು ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿ ಲೇವಡಿ ಮಾಡಿದೆ.
ಹಿಂದ ದಾಳ ಉರುಳಿಸಿದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ - Siddaramaiah
ಅಧಿಕಾರದಲ್ಲಿದ್ದಾಗ ದಲಿತರ, ಹಿಂದುಳಿದವರ ವಿರೋಧವಿದ್ದಾಗಲೂ ಒಂದು ಸಮುದಾಯವನ್ನು ಓಲೈಸಲು ಮತಾಂಧ ಟಿಪ್ಪುವಿನ ಜಯಂತಿ ಆಚರಿಸಿದಿರಿ. ಈಗ ಅಲ್ಪಸಂಖ್ಯಾತರನ್ನು ಕೈಬಿಟ್ಟು ಹಿಂದ ಅಸ್ತ್ರದ ಮೊರೆ ಹೋಗಿದ್ದೀರಿ. ಅಧಿಕಾರಕ್ಕೇರುವ ಕನಸು ಕಾಣುವಾಗಲೆಲ್ಲಾ ಮಾತ್ರ ಅಹಿಂದ ವರ್ಗ ನೆನಪಾಗುವುದೇಕೆ ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ಟ್ವಿಟರ್ನಲ್ಲಿ ಕುಟುಕಿದೆ.
ಪರಮೇಶ್ವರ್ರನ್ನು ಉಪಮುಖ್ಯಮಂತ್ರಿಯಾಗಿಯೂ ಮುಂದುವರೆಯಲು ಬಿಡಲಿಲ್ಲ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸ್ವಾಭಾವಿಕವಾಗಿ ರಾಜ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಅರ್ಹರಾಗಿದ್ದರೂ ದಲಿತ ಎಂಬ ಕಾರಣಕ್ಕೆ ಅಡ್ಡಗಾಲು ಹಾಕಿದ್ದು ನೀವೇ ಅಲ್ವೇ. ಈಗ ಹಿಂದ ಸಮಾವೇಶದ ಮೂಲಕ ದಲಿತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ನಾಟಕ ಮಾಡುವುದು ಯಾವ ಪುರುಷಾರ್ಥಕ್ಕಾಗಿ. ಈ ಮೊದಲು ಅಹಿಂದ ಎಂದು ಸಂಘಟನೆ ಮಾಡಿ ನಿರ್ದಿಷ್ಟ ಸಮುದಾಯಗಳನ್ನು ಪ್ರತ್ಯೇಕ ಮಾಡಿದಿರಿ. ಈಗ ಅಹಿಂದದಲ್ಲಿ ಅಲ್ಪಸಂಖ್ಯಾತರನ್ನು ಬಿಟ್ಟು ಹಿಂದ ಹೋರಾಟ ಎಂಬ ನಾಟಕ ಮಾಡುತ್ತಿದ್ದೀರಿ. ಜೀವನ ಪರ್ಯಂತ ಸಮಾಜವನ್ನು ವಿಘಟಿಸುವುದೇ ನಿಮ್ಮ ಕಾಯಕವೇ?
ಅಧಿಕಾರದಲ್ಲಿದ್ದಾಗ ಲಿಂಗಾಯತ, ವೀರಶೈವ ಎಂಬ ವಿಚಾರವನ್ನು ತಂದು ಧರ್ಮದ ಕಿಚ್ಚು ಹಚ್ಚಿದಿರಿ. ಈಗ ಹಿಂದ ಹೋರಾಟ ಎಂಬ ನಾಟಕ ರಂಗ ಆರಂಭಿಸಿದ್ದೀರಿ. ಈ ನೆಲದಲ್ಲಿ ಸಂತರು, ಶರಣರು, ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಸಾರಿದ್ದರೆ, ನೀವು ಮಾತ್ರ ವಿಘಟನೆ, ವಿಂಗಡಣೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಅಧಿಕಾರ ಇಲ್ಲದಾಗ ಸಿದ್ದರಾಮಯ್ಯರಿಗೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ನೆನಪಾಗುತ್ತದೆ. ಅಧಿಕಾರ ಇದ್ದಾಗ ಅಹಿಂದ ವರ್ಗವನ್ನು ದೂರ ಸರಿಸುತ್ತಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಪಸಂಖ್ಯಾತರನ್ನು ಬಿಟ್ಟು, ಹಿಂದುಳಿದವರ & ದಲಿತರ ಸಂಘಟನೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ಟೀಕಿಸಿದೆ.