ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ರಾಜ್ಯ ನಾಯಕರ ಸಭೆ ನಡೆದಿದೆ. ಭದ್ರತೆ ಕುರಿತು ಎಸ್ಪಿಜಿ ತಂಡ ಬಿಜೆಪಿ ಕಚೇರಿಯಲ್ಲಿ ಪರಿಶೀಲನೆ ನಡೆಸಿತು.
ಮಲ್ಲೇಶ್ವರದನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವ ಗೋವಿಂದ್ ಕಾರಜೋಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭಾಗಿಯಾಗಿದ್ದಾರೆ.
ಅಮಿತ್ ಶಾ ನಡೆಸುವ ಸಭೆಯಲ್ಲಿ ನೀಡಬೇಕಾದ ವಿವರಗಳು, ಚರ್ಚಿಸಬೇಕಾದ ವಿಷಯಗಳು, ಪಕ್ಷ ಸಂಘಟನೆ ಕುರಿತು ಕೈಗೊಂಡ ಕ್ರಮ, ಸರ್ಕಾರ ಪಕ್ಷದ ನಡುವಿನ ಸಮನ್ವಯತೆ, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಶ್ರಮ ಸೇರಿದಂತೆ ಸಂಘಟನೆ ಮತ್ತು ಸರ್ಕಾರದ ವಿಚಾರಗಳ ಕುರಿತು ಚರ್ಚೆಗೆ ಬರಬಹುದಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಂಪುಟ ವಿಸ್ತರಣೆ, ಪುನಾರಚನೆ, ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಪಕ್ಷದ ನಿಲುವನ್ನು ವ್ಯಕ್ತಪಡಿಸುವ ಕುರಿತು ಚರ್ಚಿಸಲಾಗಿದೆ ಎನ್ನಲಾಗ್ತಿದೆ.