ಬೆಂಗಳೂರು:ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಜಿಲ್ಲಾ ಮತ್ತು ಮಂಡಲ ಕಾರ್ಯಾಲಯ ಭವನಗಳ ಭೂಮಿಪೂಜೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನಾಳೆ ವರ್ಚುವಲ್ ರ‍್ಯಾಲಿ ಮೂಲಕ ನೆರವೇರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮರ್ ಸುರಾನ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10.50ರಿಂದ 12.20ರವರೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ನವದೆಹಲಿಯಿಂದ ಜೆ.ಪಿ ನಡ್ಡಾ ವರ್ಚುವಲ್ ರ‍್ಯಾಲಿ ಮೂಲಕ ಎಲ್ಲಾ ಎಂಟು ಕಟ್ಟಡಗಳ ಭೂಮಿ ಪೂಜೆಯನ್ನು ಏಕಕಾಲಕ್ಕೆ ನೆರವೇರಿಸಲಿದ್ದಾರೆ. ದೆಹಲಿಯಿಂದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಕೇಂದ್ರ ಸಚಿವರಾದ ಡಿ ವಿ ಸದಾನಂದಗೌಡ, ಪ್ರಹ್ಲಾದ್ ಜೋಷಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಸರ್ಕಾರಿ ನಿವಾಸದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚುವಲ್ ರ‍್ಯಾಲಿ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮರ್ ಸುರಾನ ಸುದ್ದಿಗೋಷ್ಠಿ ಬಿಜೆಪಿ ರಾಜ್ಯ ಕಾರ್ಯಾಲಯದಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಕಟ್ಟಡ ನಿರ್ಮಾಣ ಸಮಿತಿ ರಾಜ್ಯ ಸಂಚಾಲಕ ಮಾ. ನಾಗರಾಜ್ ಭಾಗಿಯಾಗಲಿದ್ದಾರೆ. ಎಲ್ಲಾ ಜಿಲ್ಲೆಗಳ ಕಟ್ಟಡಗಳ ಶಿಲಾನ್ಯಾಸ ಸಮಾರಂಭ ಏಕಕಾಲಕ್ಕೆ ವರ್ಚುವಲ್ ರ‍್ಯಾಲಿ ಮೂಲಕ ನೆರವೇರಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಾಲಯ ಕಚೇರಿ ಎಂದರೆ ಅದೊಂದು ಭಾವನಾತ್ಮಕ ಶ್ರದ್ಧಾಕೇಂದ್ರ. ಕೇವಲ ಇಟ್ಟಿಗೆ, ಮರಳು, ಸಿಮೆಂಟು ಮಿಶ್ರಿತ ಜಡ ಗೋಡೆಗಳಿಂದಾದ ಆಸರೆ ಮಾತ್ರವಲ್ಲದೇ ಅವರ ಭಾವನೆಗಳ ದೇವಾಲಯದಂತೆ ರೂಪಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ವೆಚ್ಚವನ್ನು ಪ್ರತಿಯೊಬ್ಬ ಕಾರ್ಯಕರ್ತರಿಂದ ಜಿಲ್ಲಾ ಕಾರ್ಯಾಲಯ ಕಟ್ಟಡ ನಿಧಿ ಅರ್ಪಣೆ ಮೂಲಕ ಸಂಗ್ರಹಿಸಲಾಗುತ್ತಿದೆ. ರಾಜ್ಯ ಸಮಿತಿಯಿಂದ ಆರ್ಥಿಕ ನೆರವು ನೀಡುತ್ತಿಲ್ಲ, ಅದರ ಅಗತ್ಯವೂ ಇಲ್ಲ. ಜಿಲ್ಲಾ ಸಮಿತಿಗಳು ಹಣ ಹೊಂದಿಸಿಕೊಳ್ಳುವಷ್ಟು ಸದೃಢವಾಗಿವೆ ಎಂದರು.
ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ರಾಜ್ಯ ಸಮಿತಿ ಸಂಚಾಲಕ ಡಾ.ಮಾ ನಾಗರಾಜ್ ಮಾತನಾಡಿ, 12 ಸಾವಿರದಿಂದ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ವರ್ಚುವಲ್ ರ‍್ಯಾಲಿ ಮೂಲಕ ಸಂವಹನ ಹಾಗೂ ಸಂವಾದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕಾರ್ಯಕರ್ತರಿಗೆ ಪ್ರಶಿಕ್ಷಣಕ್ಕಾಗಿ ಸಭಾಂಗಣ, ಮಾಧ್ಯಮ - ಸಂವಾದ ಸಭಾಂಗಣ, ಸಾರ್ವಜನಿಕ ಅಹವಾಲು ಆಲಿಸಲು ಉಪಯುಕ್ತವಾಗುವಂತೆ, ಜಿಲ್ಲೆಯ ಸಂಸದರು ಶಾಸಕರಿಗೆ ಪ್ರತ್ಯೇಕವಾದ ಸಂವಾದ ಕೊಠಡಿ, ಸಂಘಟನೆಯ ಕಾರ್ಯಕರ್ತರಿಗಾಗಿ ವಸತಿ ವ್ಯವಸ್ಥೆ ಒಳಗೊಂಡಿದೆ ಎಂದರು.
ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಚಾಮರಾಜನಗರ ಮತ್ತು ಕೋಲಾರ ಹೀಗೆ ಎಂಟು ಜಿಲ್ಲೆಗಳಲ್ಲಿ ಹಾಗೂ ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದ ಕಾರ್ಯಾಲಯ ಭವನ ನಿರ್ಮಾಣ ಮಾಡಲಾಗುತ್ತಿದೆ. 1.25-1.75 ಕೋಟಿ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. 14 ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.