ಬೆಂಗಳೂರು: ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ಮೊದಲ ಸಭೆಯಲ್ಲೇ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ, ನಿನ್ನೆ 40 ಸಾವಿರ ಕೋಟಿ ರೂ ಮೊತ್ತದ ಕೋವಿಡ್ ಅಕ್ರಮ ಬಗ್ಗೆ ಆರೋಪ ಮಾಡಿದ್ದ ಯತ್ನಾಳ್ ಬಗ್ಗೆ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ: ಬಿ.ಎಸ್.ಯಡಿಯೂರಪ್ಪ ವಿರುದ್ಧ ಯತ್ನಾಳ್ ನೀಡಿರುವ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವ ಬಗ್ಗೆ ಕೆಲ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಭಾಷಣದಲ್ಲೂ ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ. ಪಕ್ಷಕ್ಕೆ ಮುಜುಗರ ತರುವಂತೆ ಬಹಿರಂಗ ಹೇಳಿಕೆಗಳನ್ನು ಕೊಡದಂತೆ ಪದಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಯತ್ನಾಳ್ ಹೇಳಿಕೆ ಬಗ್ಗೆ ಹೈಕಮಾಂಡ್ ನೋಡಿಕೊಳ್ಳಲಿದೆ ಎಂದಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮಕ್ಕೆ ನೂತನ ಪದಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಅವರ ಹೇಳಿಕೆ ಮೇಲೆ ಕಾಂಗ್ರೆಸ್ನವರು ನಮ್ಮ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಅವರೊಬ್ಬರು ಮಾತ್ರ ಗೆದ್ದಿದ್ದಾರೆ. ಉಳಿದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಇದಕ್ಕೆ ಕಾರಣ ಯತ್ನಾಳ್ ಅವರ ಅಡ್ಜಸ್ಟ್‌ಮೆಂಟ್ ರಾಜಕಾರಣ. ಪಕ್ಷ ಕಟ್ಟಿದವರ ವಿರುದ್ಧ ಹರಿಹಾಯ್ತಿರುವುದು ಸರಿಯಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕಮಾಂಡ್ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚೆ: ಪ್ರಮುಖವಾಗಿ, ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ತಯಾರಿ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆಗಳು ನಡೆದಿವೆ. ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಂಕಾಗಿರುವ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಪಕ್ಷವನ್ನು ತಳಮಟ್ಟದಿಂದ ಬಲವರ್ಧನೆ ಮಾಡಲು ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪಕ್ಷದ ಮುಂದಿನ ಹೆಜ್ಜೆಗಳು ಏನಿರಬೇಕು ಎಂಬ ಬಗ್ಗೆಯೂ ಚರ್ಚೆಗಳಾಗಿದೆ.
ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಲು ಏನೆಲ್ಲ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದಿವೆ. ಇದರ ಜೊತೆಗೆ ಮುಂದಿನ ಬಿಬಿಎಂಪಿ ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಗಳ ಗೆಲುವಿನ ಬಗ್ಗೆಯೂ ಮಾತುಕತೆ ನಡೆದಿವೆ ಎಂದು ಮೂಲಗಳು ಹೇಳಿವೆ.
ವಿಕಸಿತ ಭಾರತ ಕಾರ್ಯಕ್ರಮ:ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ವಿಕಸಿತ ಭಾರತ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ಯಶಸ್ವಿಗೊಳಿಸುವ ಬಗ್ಗೆಯೂ ಪದಾಧಿಕಾರಿಗಳ ಸಭೆಯಲ್ಲಿ ಚರ್ಚೆಯಾಗಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ವಿಕಸಿತ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.