ಬೆಂಗಳೂರು:ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ಹೈಕಮಾಂಡ್ ಪ್ರತಿನಿಧಿಗಳಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಕುಮಾರ್ ಪಕ್ಷದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಮಾತುಕತೆ ನಡೆಸಿದರು.
ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮೊದಲು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್ ಹಾಗೂ ದುಶ್ಯಂತ್ ಗೌತಮ್ ಕುಮಾರ್ ನಂತರ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸ 'ಧವಳಗಿರಿ'ಗೆ ಭೇಟಿ ನೀಡಿದರು. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜೊತೆಯಲ್ಲಿ ಬಿಎಸ್ವೈ ಭೇಟಿಯಾದ ಹೈಕಮಾಂಡ್ ಪ್ರತಿನಿಧಿಗಳು ಕುಶಲೋಪರಿ ವಿಚಾರಿಸಿ ಕೆಲ ಸಮಯ ಮಾತುಕತೆ ನಡೆಸಿದರು.
ಹೈಕಮಾಂಡ್ ವೀಕ್ಷಕರು ಬಿಎಸ್ವೈ, ಬೊಮ್ಮಾಯಿ ಜೊತೆ ಮಾತುಕತೆ ಬಿಎಸ್ವೈ ಭೇಟಿ ನಂತರ ಆರ್.ಟಿ. ನಗರಕ್ಕೆ ತೆರಳಿದ ಹೈಕಮಾಂಡ್ ಪ್ರತಿನಿಧಿಗಳು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಿ ಸಮಾಲೋಚನೆ ನಡೆಸಿದರು. ಬಳಿಕ ಬಿಜೆಪಿಯ ಅತೃಪ್ತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮನೆಗೆ ಕೇಂದ್ರದ ವೀಕ್ಷಕರ ತಂಡ ಆಗಮಿಸಿ, ಚರ್ಚಿಸಿತು. ಶಾಸಕಾಂಗ ಪಕ್ಷದ ಸಭೆಗೂ ಮೊದಲೇ ಯತ್ನಾಳ್ ಜೊತೆ ಮಾತುಕತೆ ನಡೆಸಿದ್ದು, ಬಿಜೆಪಿ ಪಾಳಯದಲ್ಲಿ ಕುತೂಹಲ ಮೂಡಿಸಿದೆ.
ಯತ್ನಾಳ್ ಜೊತೆಗೆ ಹೈಕಮಾಂಡ್ ವೀಕ್ಷಕರ ಮಾತುಕತೆ ಕೇಂದ್ರದ ವೀಕ್ಷಕರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ''ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ವಿಪಕ್ಷ ನಾಯಕನ ಆಯ್ಕೆ ಮಾಡಲು ವೀಕ್ಷಕರು ಬಂದಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಯಾರನ್ನು ಆಯ್ಕೆ ಮಾಡಬೇಕೆಂಬ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾಯಕರ ಹೆಸರನ್ನು ಇವತ್ತೇ ಘೋಷಣೆ ಮಾಡಬಹುದು ಅಥವಾ ದೆಹಲಿಗೆ ಮರಳಿದ ಬಳಿಕ ಘೋಷಣೆ ಮಾಡಬಹುದು. ಆದರೆ, ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ಮಾಡಲಾಗುತ್ತದೆ. ಯಾವ ಸಮುದಾಯಕ್ಕೆ ವಿಪಕ್ಷ ಸ್ಥಾನ ಕೊಡಬೇಕು ಅಂತ ಹೈಕಮಾಂಡ್ ಮನಸ್ಸಿನಲ್ಲಿ ಇದೆಯೋ, ಅದರ ಬಗ್ಗೆ ನನಗೆ ಗೊತ್ತಿಲ್ಲ'' ಎಂದರು.
ಹೈಕಮಾಂಡ್ ವೀಕ್ಷಕರು ಬಿಎಸ್ವೈ, ವಿಜಯೇಂದ್ರ ಜೊತೆ ಭೇಟಿ ಎಸ್.ಟಿ. ಸೋಮಶೇಖರ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ನಿನ್ನೆ ಸೋಮಶೇಖರ್ ಬಂದಿದ್ರು, ನಾನು ಅವರ ಜೊತೆ ಮಾತಾಡಿದ್ದೇನೆ. ಅವರು ಆರಾಮವಾಗಿದ್ದಾರೆ. ವಿಶೇಷ ಕಾರಣಕ್ಕೆ ಇವತ್ತು ದೆಹಲಿಗೆ ಹೋಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಮತ್ತೆ ಬಂದು ನಮ್ಮ ಜೊತೆಯಲ್ಲೇ ಇನ್ನೂ ಸಕ್ರಿಯವಾಗಿ ಇರುತ್ತಾರೆ'' ಎಂದು ತಿಳಿಸಿದರು.
ಅತೃಪ್ತರು ಬಿಜೆಪಿ ಶಾಸಕಾಂಗ ಸಭೆಗೆ ಬರ್ತಾರಾ ಎಂಬ ಪ್ರಶ್ನೆಗೆ ಬಿಎಸ್ವೈ, ''ಯಾರೋ ಒಂದಿಬ್ಬರು ಬರದೇ ಇರಬಹುದು. ಆದರೆ, ಅದು ಮುಖ್ಯವಲ್ಲ. ಇವತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೆ. ಸಭೆಯಲ್ಲಿ ಚರ್ಚೆ ಮಾಡಿ ವಿಪಕ್ಷ ನಾಯಕನ ಬಗ್ಗೆ ತೀರ್ಮಾನ ಮಾಡಲಾಗುತ್ತದೆ'' ಎಂದು ಹೇಳಿದರು.
ಇದನ್ನೂ ಓದಿ:ದಂಡ ಕಟ್ಟಿದ್ದೇನೆ, ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಿ: ಹೆಚ್.ಡಿ.ಕುಮಾರಸ್ವಾಮಿ