ಬೆಂಗಳೂರು :ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಸಂಘಟನಾತ್ಮಕ ಚಟುವಟಿಕೆ ಆರಂಭಿಸಿರುವ ಬಿ ವೈ ವಿಜಯೇಂದ್ರ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ಕೇಶವಕೃಪಾಗೆ ಭೇಟಿ ನೀಡಿ ಸಂಘದ ಹಿರಿಯರ ಮಾರ್ಗದರ್ಶನ ಪಡೆದುಕೊಂಡರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಪ್ರಕಟಗೊಂಡ ನಂತರದ ಮೊದಲ ದಿನವೇ ಬೂತ್ ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡುವ ಮೂಲಕ ಅಧಿಕೃತವಾಗಿ ಸಂಘಟನಾತ್ಮಕ ಚಟುವಟಿಕೆ ಆರಂಭಿಸಿರುವ ಬಿ ವೈ ವಿಜಯೇಂದ್ರ ನಂತರ ನೇರವಾಗಿ ಚಾಮರಾಜಪೇಟೆಗೆ ತೆರಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೇಂದ್ರ ಕಚೇರಿ ಕೇಶವಕೃಪಾಗೆ ಭೇಟಿ ನೀಡಿದ ಅವರು, ಸಂಘದ ಸಂಸ್ಕೃತಿಯಂತೆ ಭಾರತಮಾತೆ ಮತ್ತು ಸೀತಾ ರಾಮ ಲಕ್ಷ್ಮಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಸಂಘಟನಾತ್ಮಕ ಹೊಣೆಗಾರಿಕೆ ನಿಭಾಯಿಸುವ ಕುರಿತು ಮಾರ್ಗದರ್ಶನ ಪಡೆದುಕೊಂಡರು.
ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ರಾಜ್ಯ ನಾಯಕರು ಆಗಾಗ ಸಂಘದ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸುವುದು ವಾಡಿಕೆಯಾಗಿದೆ. ಪಕ್ಷದಿಂದ ಆಯ್ಕೆಯಾದ ನೂತನ ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಸಂಘದ ಕಚೇರಿಗೆ ಭೇಟಿ ನೀಡುವುದು ಸಂಪ್ರದಾಯ. ಅದರಂತೆ ಇಂದು ವಿಜಯೇಂದ್ರ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಹಿರಿಯರಿಂದ ಆಶೀರ್ವಾದ ಪಡೆದರು.