ಕರ್ನಾಟಕ

karnataka

ETV Bharat / state

ದೇಶದ ಅಭಿವೃದ್ಧಿಯ ದಿಕ್ಸೂಚಿ ಬಜೆಟ್: ಸಿ ಟಿ ರವಿ - Central Budget 2022

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಕೇಂದ್ರದ ಬಜೆಟ್ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದು, ಇದು ದೇಶದ ಅಭಿವೃದ್ಧಿಯ ದಿಕ್ಸೂಚಿ ಬಜೆಟ್ ಎಂದು ಬಣ್ಣಿಸಿದ್ದಾರೆ.

BJP National Secretary General CT Ravi About Central Budget 2022
ಬಜೆಟ್ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ

By

Published : Feb 1, 2022, 10:34 PM IST

ಬೆಂಗಳೂರು: 60 ಲಕ್ಷ ಉದ್ಯೋಗಗಳ ಸೃಷ್ಟಿಯ ಗುರಿಯ ಜೊತೆಗೆ ಆರ್ಥಿಕತೆಯನ್ನು ಉನ್ನತಿಗೆ ಕೊಂಡೊಯ್ಯವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ದೇಶದ ಅಭಿವೃದ್ಧಿಯ ದಿಕ್ಸೂಚಿಯಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಭಾರತದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದ್ದು, ಜನಸಾಮಾನ್ಯರಿಗೆ, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಆಶಾದಾಯಕವಾಗಿದೆ. ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡಿರುವುದು ದೂರದೃಷ್ಟಿಯ ಬಜೆಟ್‍ಗೆ ಹಿಡಿದ ಕೈಗನ್ನಡಿಯಂತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ಒನ್ ಕ್ಲಾಸ್ ಒನ್ ಟಿವಿ’ ಆರಂಭಿಸಿರುವುದು ಶಾಘನೀಯ. ಪ್ರಧಾನಿ ‘ಇ-ವಿದ್ಯಾ’ ಯೋಜನೆ ಅಡಿಯಲ್ಲಿ 200 ಚಾನಲ್‍ಗಳು ಅಸ್ತಿತ್ವಕ್ಕೆ ಬರಲಿದ್ದು, ಶಿಕ್ಷಣಕ್ಕೆ ಪೂರಕವಾದ ಯೋಜನೆಯಾಗಿದೆ. 'ಕೆನ್ ಬೆಟ್ವಾ' ಯೋಜನೆಯ ಅನುಷ್ಠಾನದ ಮೂಲದ ಅಂದಾಜು ವೆಚ್ಚ 44,605 ಕೋಟಿಯಲ್ಲಿ 9 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್, 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಸ್ವಾವಲಂಬಿತನಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ.

ಕಾವೇರಿ, ಪೆನ್ನಾರ್ ಸೇರಿ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಿರುವುದು ಕರ್ನಾಟದ ಅಭಿವೃದ್ಧಿಗೆ ದೊಡ್ಡ ಕೊಡುಗೆ ಎಂದರೆ ತಪ್ಪಲ್ಲ. ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್, ನರ್ಮದಾ-ಗೋದಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಿರುವುದು ಸಮಗ್ರ ಅಭಿವೃದ್ಧಿಗೆ ಉತ್ತಮವಾದ ಯೋಜನೆಯಾಗಿದೆ. ಇದಕ್ಕಾಗಿ ಈ ಬಜೆಟ್‍ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದ್ದು, ಇದು ರೈತರ ಪಾಲಿಗೆ ಆಶಾದಾಯಕವಾದ ಯೋಜನೆಯಾಗಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.

2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ರೂ. 48,000 ಕೋಟಿ ಮಂಜೂರು ಮಾಡಿರುವುದು ಅದ್ಭುತವಾದ ಯೋಜನೆಯಾಗಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿರುವುದು ಶಾಘನಾರ್ಹ ಎಂದರು.

ಡಿಜಿಟಲ್ ಬ್ಯಾಂಕಿಂಗ್ ತನ್ನ ಪ್ರಯೋಜನಗಳನ್ನು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಿದ್ದು, ಆರ್ಥಿಕಾಭಿವೃದ್ಧಿಗೆ ಪೂರಕವಾಕವಾಗಲಿವೆ. 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು ಸಾರ್ವಜನಿಕರ ಒಳಿತಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮವಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಅಂದಾಜು ಶೇ.9.2ರಷ್ಟಿರುವುದು ದೇಶದ ಪ್ರಗತಿಯ ಸಂಕೇತ. ಒಟ್ಟಾರೆ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಟೊಂಕಕಟ್ಟಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರೈತಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮೆಚ್ಚುಗೆ:

ಕೇಂದ್ರದ ಬಜೆಟ್‍ನಲ್ಲಿ ದೇಶದಾದ್ಯಂತ ರಾಸಾಯನಿಕಮುಕ್ತ ನೈಸರ್ಗಿಕ ಕೃಷಿಗೆ ಆದ್ಯತೆ ಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಮೂಲಕ ಕೃಷಿ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹಲವಾರು ಯೋಜನೆಗಳನ್ನು ನೀಡುವ ಮೂಲಕ ರೈತರಿಗೆ ಆದ್ಯತೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ವಾಗತಿಸಿದ್ದಾರೆ.

ವಿರೋಧ ಪಕ್ಷಗಳು ಕೃಷಿ ಕಾನೂನುಗಳ ವಿಚಾರದಲ್ಲಿ ಅಪಪ್ರಚಾರ ಮಾಡಿ ರೈತರ ದಿಕ್ಕು ತಪ್ಪಿಸುತ್ತಿವೆ.ಆದರೂ ರೈತರ ಪರವಾಗಿ ಕೇಂದ್ರ ಸರ್ಕಾರ ಬದ್ಧತೆ ಪ್ರದರ್ಶನ ಮಾಡಿದೆ. 2022-23ನೇ ಸಾಲಿನ ಬಜೆಟ್ ಮೊತ್ತ ರೂ. 39.54 ಲಕ್ಷ ಕೋಟಿ ಗಾತ್ರದ್ದಾಗಿದ್ದು, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ರೈತರಿಗಾಗಿ ‘ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಯೋಜನೆ ಅನುಷ್ಠಾನ, 2023ರ ವರ್ಷವನ್ನು ಸಿರಿ ಧಾನ್ಯಗಳ ವರ್ಷವೆಂದು ಘೋಷಣೆ, ಕೃಷಿ ವಿಶ್ವವಿದ್ಯಾಲಯಕ್ಕೆ ಉತ್ತೇಜನ, 400 ವಂದೇ ಭಾರತ ರೈಲುಗಳ ಘೋಷಣೆ, 2022-23ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣದ ಗುರಿ, 2 ಲಕ್ಷ ಅಂಗನವಾಡಿಗಳ ಆಧುನೀಕರಣಕ್ಕೆ ಮುಂದಾಗಲಿದ್ದು, ಕಾವೇರಿ-ಪೆನ್ನಾರ್ ನದಿ ಜೋಡಣೆ ಯೋಜನೆಯನ್ನು ರೂ. 44,605 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಈ ಯೋಜನೆ ಜಾರಿಯಾದರೆ 9 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಇಳಿಕೆ ಕಂಡ ಕೊರೊನಾ ಕೇಸ್​: 14,366 ಮಂದಿಗೆ ಕೋವಿಡ್​ ದೃಢ, 58 ಸಾವು

ಪಿಎಂ ಇ-ವಿದ್ಯಾ ಯೋಜನೆಯಡಿ 400 ಶಿಕ್ಷಣ ಚಾನಲ್‍ಗಳ ಆರಂಭ, 1 ಕೋಟಿಯಿಂದ 10 ಕೋಟಿ ರೂ. ಆದಾಯ ಇರುವ ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೇ.12 ರಿಂದ ಶೇ.7ಕ್ಕೆ ಇಳಿಕೆ. ಇದು ಗ್ರಾಮೀಣ ಮತ್ತು ಕೃಷಿ ಸಮುದಾಯಗಳಿಂದ ಬಂದಿರುವ ಸಹಕಾರ ಸಂಘಗಳು ಮತ್ತು ಅದರ ಸದಸ್ಯರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ. ಸಶಕ್ತ, ಸ್ವಾವಲಂಬಿ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯಂತ ಆಶಾದಾಯಕವಾಗಿದೆ ಎಂದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details