ಬೆಂಗಳೂರು :ಮುಂಬರುವ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಈಗಿನಿಂದಲೇ ತಾಲೀಮು ಆರಂಭಿಸಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವಅಮಿತ್ ಶಾ ಅವರ ಎರಡು ದಿನಗಳ ರಾಜ್ಯ ಪ್ರವಾಸ ಮುಗಿಯುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜ 5 ಮತ್ತು 6ರಂದು ಕರ್ನಾಟಕ ರಾಜ್ಯ ಪ್ರವಾಸ ಮಾಡಲಿದ್ದಾರೆ. ಹಳೆ ಮೈಸೂರು ಭಾಗಕ್ಕೆ ಅಮಿತ್ ಶಾ ಭೇಟಿ ನೀಡಿದ್ದರೆ ಮಧ್ಯ ಕರ್ನಾಟಕ ಭಾಗಕ್ಕೆ ನಡ್ಡಾ ಆದ್ಯತೆ ನೀಡುತ್ತಿದ್ದಾರೆ.
ಜ.5ರಂದು ಮಧ್ಯಾಹ್ನ ಅವರು ತುಮಕೂರಿನಲ್ಲಿ, ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ. ಸಂಜೆ ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ, ಒನಕೆ ಓಬವ್ವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾದಾರ ಚೆನ್ನಯ್ಯ ಮಠ, ಸಿರಿಗೆರೆ ಶ್ರೀ ತರಳಬಾಳು ಮಠಕ್ಕೆ ಭೇಟಿ ನೀಡಿದ ನಂತರ ದಾವಣಗೆರೆ ವಿಭಾಗದ ಸಂಸದರು, ಶಾಸಕರು, ಎಂಎಲ್‍ಸಿಗಳು ಮತ್ತು ಜಿಲ್ಲಾ ಅಧ್ಯಕ್ಷರ ಸಭೆಯಲ್ಲಿ ನಡ್ಡಾ ಭಾಗವಹಿಸಲಿದ್ದಾರೆ.
ಜ.6ರಂದು ಬೆಳಗ್ಗೆ ಹರಿಹರದ ಪಂಚಮಸಾಲಿ ಮಠ, ಬೆಳ್ಳುಡಿಯ ಶ್ರೀ ಕನಕಗುರುಪೀಠ, ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ದಾವಣಗೆರೆ ದಕ್ಷಿಣದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ಸಿರಾದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅರುಣ್ ಸಿಂಗ್ ರಾಜ್ಯ ಪ್ರವಾಸ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಜನವರಿ ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಡಲಿದ್ದಾರೆ. ನಂತರ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕುಮಾರಕೃಪ ಗೆಸ್ಟ್ ಹೌಸ್ಗೆ ತೆರಳುತ್ತಾರೆ ಎಂದು ತಿಳಿದುಬಂದಿದೆ.