ಬೆಂಗಳೂರು :ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ತಮಾಷೆಗೆ ಆಹ್ವಾನ ಮಾಡಿದ್ದು. ಇನ್ನು ನೀವೇ ಹೇಳಿದ್ದೀರಿ ಎಂದು ನಮ್ಮಲ್ಲಿ ಬಂದು ಟಿಕೆಟ್ ಕೇಳಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇದನ್ನೇ ಗಂಭೀರವಾಗಿ ಪರಿಗಣಿಸಬಾರದು. ನಾನು ತಮಾಷೆಗೆ ಹೇಳಿದ್ದು. ಇನ್ನು ನೀವೇ ಹೇಳಿದ್ದೀರಾ ಎಂದು ಬಂದು ನಮ್ಮಲ್ಲಿ ಟಿಕೆಟ್ ಕೇಳಬೇಡಿ. ನನ್ನ ಬಗ್ಗೆ ಆಕ್ರೋಶ ಭಾವನೆ ಬೇಡ. ನಾನು ಜೆಡಿಎಸ್ ಹೈಕಮಾಂಡ್ ಅಲ್ಲ. ಅವರ ಹೈಕಮಾಂಡ್ ಅವರ ಮನೆಯಲ್ಲೇ ಇದೆ ಎಂದು ಹೇಳಿದರು.
ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತವಲ್ಲ :ಅವರದ್ದು ಮನೆ ಜಗಳ ಎಂದು ನಾನು ಹೇಳಿದ್ರೆ ತಪ್ಪಾಗುತ್ತದೆ. ಹಾಸನದಲ್ಲಿ ಪ್ರೀತಂ ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರೀತಂ ಜನಪ್ರಿಯತೆ ಇತ್ತೀಚೆಗೆ ಹೆಚ್ಚಾಗಿದೆ. ಜನರ ಬೆಂಬಲ ಪ್ರೀತಂ ಪರ ಇದೆ. ಜೆಡಿಎಸ್ನಿಂದ ಯಾರೇ ಅಭ್ಯರ್ಥಿ ಆದರೂ ಪ್ರೀತಂ ಗೆಲ್ಲೋದು ನಿಶ್ಚಿತ. ಭವಾನಿ ಅಕ್ಕ ಅವರಿಗೆ ಹಾಸನ ಸುರಕ್ಷಿತ ಕ್ಷೇತ್ರ ಅಲ್ಲ ಎಂದರು.
ಮಂಡ್ಯದಲ್ಲಿ ಅಶೋಕ್ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಯಾರೋ ವಿರೋಧಿಸುತ್ತಾರೆ ಎಂದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ಇದರ ಹಿಂದೆ ಯಾರಿದ್ದಾರೆ, ಇದರ ಹಿನ್ನೆಲೆ ಏನು ಎಂಬ ಬಗ್ಗೆ ನಾವೂ ಯೋಚನೆ ಮಾಡುತ್ತೇವೆ. ನಮಗೆ ಯಾರ ಬಳಿಯೂ ಒಳ ಒಪ್ಪಂದವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಶೋಕ್ ಅವರಿಗೆ ವಿರೋಧ ವ್ಯಕ್ತವಾಗಿದೆ. ಅನ್ನೋದಕ್ಕಿಂತ ಅವರನ್ನು ದೊಡ್ಡ ಪ್ರಮಾಣದಲ್ಲಿ ಸ್ವಾಗತವನ್ನೂ ಮಂಡ್ಯ ಕಾರ್ಯಕರ್ತರು ಮಾಡಿಕೊಂಡರು. ಸ್ವಾಗತವನ್ನೂ ನಾವು ನೋಡಿದ್ದೇವೆ ಎಂದು ತಿಳಿಸಿದರು.
ನಮ್ಮಲ್ಲಿ ಪಕ್ಷದ ರಾಜಕಾರಣ ಅಗತ್ಯ: ಬೆಳಗಾವಿ ಬಣ ಸಂಘರ್ಷಕ್ಕೆ ಅಮಿತ್ ಷಾ ಸಭೆ ವಿಚಾರವಾಗಿ ಮಾತನಾಡಿ, 2006ರವರೆಗೂ ನಮ್ಮ ಪಕ್ಷ ನೀತಿ ಅವಲಂಬಿಸಿತ್ತು. ಆ ನಂತರ ಜಾತಿ ಪ್ರಭಾವ ಹೆಚ್ಚಾಯ್ತು, ಉಪ ಜಾತಿಗಳ ಪ್ರಭಾವ ಹೆಚ್ಚಾಯ್ತು. ಆ ಮೇಲೆ ವ್ಯಕ್ತಿ ಕೇಂದ್ರಿತ ರಾಜಕಾರಣ ಬಂತು ಎಂದು ತಿಳಿಸಿದರು. ಈ ಎಲ್ಲ ನೀತಿಗೆ ಕೆಲವರನ್ನು ತಯಾರು ಮಾಡ ಬೇಕಾಗುತ್ತದೆ. ಕೆಲವರಿಗೆ ನಮ್ಮ ಪಕ್ಷದ ನೀತಿ ಸಿದ್ಧಾಂತಗಳನ್ನು ಅರ್ಥ ಮಾಡಿಸಬೇಕಾಗುತ್ತದೆ. ಇದರಲ್ಲಿ ನಾವು ಯಶಸ್ವಿಯಾಗುವ ವಿಶ್ವಾಸ ಇದೆ. ನಮ್ಮಲ್ಲಿ ಪಕ್ಷದ ರಾಜಕಾರಣ ಅಗತ್ಯ. ವ್ಯಕ್ತಿಗತ ಹಿತಾಸಕ್ತಿಯ ರಕ್ಷಣೆಯೂ ಇದರಿಂದ ಆಗುತ್ತದೆ ಎಂದು ತಿಳಿಸಿದರು.