ಬೆಂಗಳೂರು: ಪಠ್ಯದಲ್ಲಿ ಕಾರ್ಲ್ ಮಾರ್ಕ್ಸ್, ಮಾವೋ ಕುರಿತಾದ ಪಠ್ಯಗಳು ಇರಬಹುದು. ಆದರೆ ಆರ್ಎಸ್ಎಸ್ ಸಂಸ್ಥಾಪಕ ಡಾ. ಹೆಡ್ಗೆವಾರ್ ಅವರ ಪಾಠ ಇರಬಾರದು ಎಂಬುದು ಅಸಹಿಷ್ಣುತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಪಠ್ಯ ಪರಿಷ್ಕರಣೆ ವಿಚಾರವಾಗಿ ಇಂದು ಮಾತನಾಡಿದ ಅವರು, ಶಾಲಾ ಪಠ್ಯದಲ್ಲಿ ಪ್ರಜಾಪ್ರಭುತ್ವ ಒಪ್ಪದ ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು. ಅವರು ಈ ದೇಶಕ್ಕೆ ಸಂಬಂಧಪಟ್ಟವರೇ ಅಲ್ಲ. ಕಾರ್ಲ್ ಮಾರ್ಕ್ಸ್, ಮಾವೋ ಇಬ್ಬರೂ ಪ್ರಜಾಪ್ರಭುತ್ವ ವಿರೋಧಿಗಳು. ಮಾವೋವಾದಿಗಳ ಪಾಠ ಇರಬಹುದು, ಮಾರ್ಕ್ಸ್ ವಾದಿಗಳ ಪಾಠ ಇರಬಹುದು. ಆದರೆ ದೇಶಭಕ್ತ ಡಾ. ಹೆಡ್ಗೇವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ ಎಂದು ಟೀಕಿಸಿದರು.
ಸೈದ್ಧಾಂತಿಕವಾಗಿ ಹೆಡ್ಗೆವಾರ್ ಅವರನ್ನು ವಿರೋಧಿಸಬಹುದು. ಆದರೆ, ಅವರ ದೇಶಭಕ್ತಿಯನ್ನು ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ. ಅವರು ಪಠ್ಯ ಪರಿಷ್ಕರಣೆ ಮಾಡಲಿ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಹಾಗಂತ ಏನೂ ಬೇಕಾದರೂ ಮಾಡುತ್ತೇವೆ ಎಂದರೆ ಅದಕ್ಕೂ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಚುನಾವಣೆಯ ಬಳಿಕ ಇದು ಪ್ರಥಮ ವಿಜೇತ ಶಾಸಕರ ಸಭೆಯಾಗಿದೆ. ಸಭೆಯಲ್ಲಿ 22 ಮಂದಿ ಮೊದಲ ಬಾರಿ ಆಯ್ಕೆ ಆದ ಸದಸ್ಯರ ಪರಿಚಯ ಮಾಡಲಾಗಿದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಜನ ವಿರೋಧಿ ಕೆಲಸ ಮಾಡಿದರೆ ಹಾಗೂ ರಾಜ್ಯಕ್ಕೆ ಘಾತಕವಾದ ನಿರ್ಧಾರ ಕೈಗೊಂಡರೆ, ಸದನದ ಒಳಗೆ ಹೊರಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.