ಬೆಂಗಳೂರು:ತಮಿಳುನಾಡಿನಲ್ಲಿ ಬಿಜೆಪಿ ಎರಡಂಕಿ ಮುಟ್ಟುವಲ್ಲಿ ಸಫಲವಾಗಲಿದ್ದು, ಮತ್ತೊಮ್ಮೆ ಡಿಎಂಕೆ ಅಧಿಕಾರಕ್ಕೆ ಬರುವ ಕನಸು ಹುಸಿಯಾಗಲಿದೆ. ಎಐಎಡಿಎಂಕೆ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅಣ್ಣಾಮಲೈ, ಖುಷ್ಬು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಭವಿಷ್ಯದ ಬೆಳವಣಿಗೆಗೆ ಬೇಕಾದ ಫಲಿತಾಂಶ ಲಭ್ಯವಾಗಲಿದೆ. ಡಿಎಂಕೆ ಮೈತ್ರಿಗಿಂತ ನಮ್ಮ ಮೈತ್ರಿ ಉತ್ತಮವಾಗಿದೆ. ಜನರಿಗೆ 10 ವರ್ಷದ ಹಿಂದಿನ ಡಿಎಂಕೆ ಗೂಂಡಾ ರಾಜ್ಯದ ನೆನಪು ಸಾಕಾಗಿದೆ ಅವರಿಗೆ ಯಾರು ಮತ ಹಾಕುವುದಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ಮೌಲ್ಯ ಇಟ್ಟುಕೊಂಡಿರುವ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿ ಕೂಟ ಬೇಕಾ? ಅಥವಾ ಭ್ರಷ್ಟಾಚಾರ, ಭೂಕಬಳಿಕೆ, ಗೂಂಡಾ ಚಟುವಟಿಕೆ, ಮಾಫಿಯಾಗಳು ಬೇಕಾ? ಎನ್ನುವ ಪ್ರಶ್ನೆ ಮುಂದಿಡುತ್ತಿದ್ದೇವೆ. ಅಲ್ಲಿನ ಜನರು ಮಾಫಿಯಾ ರಾಜ್ಯ ಬೇಡ ಎನ್ನುತ್ತಿದ್ದಾರೆ. ಹಾಗಾಗಿ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.