ಬೆಂಗಳೂರು : ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಕುರಿತ ಆಂತರಿಕ ಮತ್ತು ಬಾಹ್ಯ ವರದಿಗಳು ಬಿಜೆಪಿ ಹೆಚ್ಚಿನ ಮತ ಪಡೆದು ಗೆಲ್ಲುವ ವಾತಾವರಣ ಇದೆ ಅಂತಿವೆ. ಇದೇ ವಿಚಾರ ಇಂದಿನ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆಯಾಗಿದೆ. ಹಲವು ಹೆಸರುಗಳ ಪ್ರಸ್ತಾಪ ಆಗಿವೆ. ಮೂರ್ನಾಲ್ಕು ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿ ಕೊಡುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎರಡೂ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ಸಂಘಟಿತವಾಗಿ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟ ವಿಚಾರದಲ್ಲಿ ಬಿಜೆಪಿಯಲ್ಲಿ ಒಳ ಒಪ್ಪಂದ ಆಗಿದೆಯೇ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಪಕ್ಷದವರು ಯಾರಿಗೆ ಟಿಕೆಟ್ ಕೊಡಬೇಕೆಂದು ನಾನು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ಎಷ್ಟು ಜನ ಆರ್ಎಸ್ಎಸ್ನವರಿಗೆ ಟಿಕೆಟ್ ಕೊಟ್ಟಿದ್ದಾರೆ? ಹಾಗಿದ್ದರೆ, ಅವರಿಗೆ ರಾಷ್ಟ್ರೀಯ ಹಿತ ಇಲ್ಲವೇ ಎಂದು ನಾನು ಕೇಳಲು ಸಾಧ್ಯವೇ ಎಂದು ಕೇಳಿದರು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಟಿಕೆಟ್ ಕುರಿತು ನಿರ್ಧರಿಸುತ್ತವೆ ಎಂದರು.
ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಆಗಿದ್ದರೂ ಅವರು ಸೋಲುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದವು. ಫಲಿತಾಂಶ ಏನಾಗಿದೆ ಎಂದು ಗೊತ್ತೇ ಇದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಅಭ್ಯರ್ಥಿ, ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿಲ್ಲ. ಬಾದಾಮಿ ಕ್ಷೇತ್ರ ಒಳಗೊಂಡ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸೋತಿತ್ತು ಎಂದು ತಿಳಿಸಿದರು.
ನಮ್ಮದು ಪಾಸಿಟಿವ್ ಪಾಲಿಟಿಕ್ಸ್. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ, ಸಾಧನೆ, ತತ್ವ-ಸಿದ್ಧಾಂತಗಳನ್ನು ಆಧರಿಸಿ ನಾವು ಚುನಾವಣೆ ಎದುರಿಸಲಿದ್ದೇವೆ. ಕಾಂಗ್ರೆಸ್‍ನವರು ಏನು ಮಾಡ್ತಾರೆ, ಜೆಡಿಎಸ್‍ನವರು ಏನು ಮಾಡ್ತಾರೆ, ಅವರು ಏನು ಮಸಾಲೆ ಅರೀತಾರೆ ಎಂಬುದರ ಆಧಾರದಲ್ಲಿ ನಮ್ಮ ಅಡುಗೆ ತಯಾರಾಗೋಲ್ಲ. ನಮ್ಮಲ್ಲಿರುವ ಮಸಾಲೆ ಆಧರಿಸಿ ನಮ್ಮ ಅಡುಗೆ ತಯಾರಾಗುತ್ತದೆ. ಅದನ್ನು ಜನರಿಗೆ ಬಡಿಸುತ್ತೇವೆ ಎಂದರು.
ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ವಾಗ್ದಾಳಿ :ಸಿದ್ದರಾಮಯ್ಯರಿಗೆ ಜನತಾದಳದ ಅಡುಗೆ ಮನೆಗೆ ಇಣುಕಿ ನೋಡುವ, ಇನ್ನೊಬ್ಬರ ಅಡುಗೆ ಮನೆ, ಬೆಡ್ ರೂಂ ಇಣುಕಿ ನೋಡುವ ಕೆಟ್ಟ ಕಾಯಿಲೆ ಯಾಕೆ ಬಂತು. ಇದು ಒಳ್ಳೆಯ ಲಕ್ಷಣ ಅಲ್ಲ ಎಂದು ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್ ನಾಯಕರ ಫೋಟೋ ಹಾಕಿ ನಾವು ಮತ ಕೇಳುವುದಿಲ್ಲ. ನಾವೇನಿದ್ದರೂ ನಮ್ಮ ಅಟಲ್ ಜಿ, ಅಡ್ವಾಣಿ, ನಮ್ಮ ನರೇಂದ್ರ ಮೋದಿಯವರು, ನಮ್ಮ ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ, ನಮ್ಮ ನಳಿನ್‍ಕುಮಾರ್ ಕಟೀಲ್, ನಮ್ಮ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಕಿಕೊಂಡು ಮತ ಕೇಳುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯರಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ ಎಂದರು. ವಿಜಯೇಂದ್ರ ಅವರಿಗೆ ಹಾನಗಲ್‍ನಲ್ಲಿ ಟಿಕೆಟ್ ಕುರಿತಂತೆ ಕೋರ್ ಕಮಿಟಿ ಚರ್ಚಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ವಿಷಯಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಮಾಧ್ಯಮಗಳಲ್ಲಿ ಚರ್ಚೆ ಆದ ಎಲ್ಲ ವಿಷಯಗಳನ್ನು ಕೋರ್ ಕಮಿಟಿ ಚರ್ಚೆ ಮಾಡುವುದಿಲ್ಲ ಎಂದರು.
ಮುಂಬರುವ ವಿಧಾನಪರಿಷತ್ ಚುನಾವಣೆ, ಸಂಘಟನೆ ಬಲಪಡಿಸಲು ಚಿಂತನ ಶಿಬಿರ ನಡೆಸುವ ಕುರಿತು ಚರ್ಚೆ ಮಾಡಲಾಗಿದೆ. ದೀಪಾವಳಿ ನಂತರ ಚಿಂತನ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಪೂರ್ವದಲ್ಲಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಅಭ್ಯರ್ಥಿ ಆಯ್ಕೆಗೆ ಚುನಾವಣೆ ಸಂದರ್ಭದಲ್ಲಿ ನಿಗದಿತ ರೀತಿಯಲ್ಲಿ ನಾಯಕರ ಪ್ರವಾಸ ನಡೆಯಲಿದೆ ಎಂದು ತಿಳಿಸಿದರು.