ಬೆಂಗಳೂರು :ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಿಷಯದಲ್ಲಿ ಸಂಸದರ ಅಭಿಪ್ರಾಯ ಕಡೆಗಣನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರು ಸಂಸದರು ನೇರವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಸಂಸದರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನಡೆಸಿದ ಸಭೆ ವೇಳೆ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಕುರಿತು ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಕೆಲ ಸಂಸತ್ ಸದಸ್ಯರು ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಧಾನ ವ್ಯಕ್ತಪಡಿಸಿದ್ದನ್ನು ಸಮರ್ಥಿಸಿಕೊಂಡರು ಎನ್ನಲಾಗಿದೆ. ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವೇಳೆ ನಮ್ಮ ಅಭಿಪ್ರಾಯ ಕಡೆಗಣಿಸಲಾಗಿದೆ. ಕೆಲವು ಕಡೆ ಅಭಿಪ್ರಾಯವನ್ನು ಕೇಳದೆ ಏಕಾಏಕಿ ನೇಮಕ ಮಾಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮ ಅಭಿಪ್ರಾಯಗಳಿಗೂ ಮನ್ನಣೆ ಸಿಕ್ಕರೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಲಿದೆ, ಇನ್ನು ಮುಂದಾದರೂ ನಮ್ಮ ಅಭಿಪ್ರಾಯವನ್ನು ಪರಿಗಣಿಸುವಂತೆ ಮನವಿ ಮಾಡಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳುವ ಭರವಸೆಯನ್ನ ಸಿಎಂ ನೀಡಿದ್ದಾರೆ ಎನ್ನಲಾಗಿದೆ.
ಸಭೆಯ ಚರ್ಚೆ ವಿವರ:
ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು( MPLAD fund) ಮುಂದುವರೆಸಲು ಪ್ರಯತ್ನಿಸುತ್ತೇನೆ. ದೇಶದ ಇತರೆ ರಾಜ್ಯಗಳಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಪೂರ್ಣ ಸಂಬಳ ಪಾವತಿಸದಿರುವ ದೃಷ್ಠಾಂತಗಳಿದ್ದು ಕರ್ನಾಟಕದಲ್ಲಿ ವೇತನ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಹಣವನ್ನು ಮಂಜೂರು ಮಾಡಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿರುವ ಬಗ್ಗೆ ಮುಖ್ಯಮಂತ್ರಿಗಳು ಸಮಾಧಾನ ವ್ಯಕ್ತಪಡಿಸಿ ಜನರಲ್ಲಿ ಜಾಗೃತಿ ಮೂಡಿಸಲು ಸಂಸದರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಕೇಂದ್ರ ಹಣಕಾಸು , ಗೃಹ ಮತ್ತಿತರ ಸಚಿವರನ್ನು ನಿಯೋಗಗಳಲ್ಲಿ ಭೇಟಿ ಮಾಡಿ ಕೇಂದ್ರದಿಂದ ಇನ್ನೂ ಹೆಚ್ಚಿನ ಹಣಕಾಸು ನೆರವು ಪಡೆದುಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತಾಸೆ ದೊರೆಯುತ್ತದೆ ಎಂದು ಸಂಸದರಿಗೆ ಸಿಎಂ ತಿಳಿಸಿದರು.
ರಾಜ್ಯದಲ್ಲಿ ಜಲಮೂಲಗಳು ಲಭ್ಯವಿರುವಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಮುಂದಿನ ಬಜೆಟ್‍ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸದರ ಸಲಹೆ/ ಮನವಿಗಳು :
1.ರಾಜ್ಯದಲ್ಲಿ ಈ ಬಾರಿ ಮೆಕ್ಕೆ ಜೋಳ ಮತ್ತು ಭತ್ತದ ಇಳುವರಿ ಹೆಚ್ಚಾಗಿದ್ದು, ಬೆಲೆ ಕುಸಿತ ತಡೆಯಲು ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆಯನ್ನು ನೀಡಬೇಕು. ಒಬ್ಬ ಸಂಸದರಿಗೆ ಕನಿಷ್ಠ 3 ಕೋಟಿ ರೂ.ಗಳ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಒದಗಿಸಬೇಕು.
2.ಗುಲ್ಬರ್ಗಾ ಇಎಸ್‍ಐ ಆಸ್ಪತ್ರೆಯ ಉನ್ನತೀಕರಣಕ್ಕೆ 860 ಎಕರೆ ಜಮೀನು ಲಭ್ಯವಿದ್ದು , 150 ಎಕೆರೆ ಪ್ರದೇಶದಲ್ಲಿ ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಬೇಕು.
3.ಕೂಡ್ಲಿಗಿ ಮತ್ತು ಸಂಡೂರು ತಾಲ್ಲೂಕುಗಳ ಕೆರೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸಬೇಕು. ಹೊಸಪೇಟೆ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಕಾರ್ಯ ಸ್ಥಗಿತಗೊಂಡಿದ್ದು , ಕಾಮಗಾರಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಬೇಕು.
4.ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿರುವ ನೀರನ್ನು ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಬಳಸಲು ವಿಸ್ಕ್ರತ ಯೋಜನಾ ವರದಿ ಸಿದ್ಧಪಡಿಸಿ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.
5.ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಕೆಐಎಡಿಬಿಯಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಗತ್ಯವಿರುವ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕ್ರಮಕ್ಕೆ ಮನವಿ.
6.ಪ್ರಧಾನ ಮಂತ್ರಿಗಳ ‘ನಲ್ ಸೇ ಜಲ್’ ಯೋಜನೆಯ ಲಾಭ ಪಡೆದುಕೊಂಡು ಜಲಜೀವನ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.
7.ವಸತಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ 700 ಕೋಟಿ ರೂ.ಗಳು ಲಭ್ಯವಿದ್ದು , ಬಳಕೆ ಪ್ರಮಾಣ ಪತ್ರ ನೀಡಿ , ರಾಜ್ಯಕ್ಕೆ ಬರಬೇಕಿರುವ ಎರಡನೇ ಕಂತನ್ನು ಬಿಡುಗಡೆ ಮಾಡಿಸಿ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಯೋಜನೆಗಳನ್ನು ಪೂರ್ಣಗೊಳಿಸಬೇಕು.
8.ಗ್ರಾಮೀಣ ಭಾಗಗಳಲ್ಲಿ ವಸತಿ ಯೋಜನೆಗಳನ್ನು ಹೆಚ್ಚು ಅನುಷ್ಠಾನಗೊಳಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗಿದೆ. ಇದು ಸಮಾಧಾನಕರ. ಚಿತ್ರದುರ್ಗ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಿ ಶೀಘ್ರ ಅನುಮೋದನೆ ನೀಡಿ , ಯೋಜನೆ ಪ್ರಾರಂಭಿಸಬೇಕು.
9.ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ನೀಡಬೇಕು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ಶೀಘ್ರ ನೇಮಕಾತಿಗಾಗಿ ಕ್ರಮ. ಕೃಷ್ಣಾ ಮೇಲ್ದಂಡೆ ಯೋಜನೆಯು 8 ಜಿಲ್ಲೆಗಳಿಗೆ ಪ್ರಯೋಜನಕಾರಿಯಾಗಿದ್ದು, ಬಾಕಿ ಕಾಮಗಾರಿಗಳ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.
10.ಮೂಡಾ ,ಟೂಡಾ ಇತ್ಯಾದಿ ಜಿಲ್ಲಾಭಿವೃದ್ಧಿ ಪ್ರಾಧಿಕಾರಗಳಿಗೆ ಸಂಸದರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದಲ್ಲಿ ಅಭಿವೃದ್ಧಿ ಪ್ರಕ್ರಿಯೆಗಳು ಶೀಘ್ರವಾಗಿ ಆಗುತ್ತವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಸಂಸದರ ಹೆಸರುಗಳನ್ನು ಮುದ್ರಿಸುವಾಗ ಶಿಷ್ಠಾಚಾರ ಪಾಲಿಸಬೇಕು.
11.ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಕುರ್ಕುಂತಾ ಸಿಮೆಂಟ್ ಕಾರ್ಖಾನೆ ಸ್ಥಗಿತಗೊಂಡಿದ್ದು, ಪುನಶ್ಚೇತನಕ್ಕೆ ಕ್ರಮ ಕೈಗೊಂಡು ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು.
ಕೊಪ್ಪಳ ಜಿಲ್ಲೆಯಲ್ಲಿ ಟಾಯ್ ಕ್ಲಸ್ಟರ್ ಜಾರಿಯಲ್ಲಿರುವುದರಿಂದ , ಕೊಪ್ಪಳ ವಿಮಾನ ನಿಲ್ದಾಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು.
ಸಿಂಧನೂರು ಬೈಪಾಸ್ ಹಾಗೂ ಕೊಪ್ಪಳ ರಿಂಗ್ ರಸ್ತೆ ಕಾಮಗಾರಿ ಬೇಗ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
12.ತುಂಗಭದ್ರಾ ಜಲಾಶಯದಿಂದ ಗಂಗಾವತಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರ ಅನುಮೋದನೆ ನೀಡಿ ಕಾರ್ಯಾರಂಭ ಮಾಡುವುದು.
ನಾರಾಯಣಪುರ ಬಲದಂಡೆ ಕಾಲುವೆ ಕೆಲಸ ಮಂದಗತಿಯಲ್ಲಿ ಸಾಗಿದ್ದು , ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಈಗಾಗಲೇ 50 ಕೋಟಿ ರೂ. ಲಭ್ಯವಿದ್ದು , ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಬೇಕು.
13.ರಾಯಚೂರಿನ ಫಾರ್ಮಾ ಪಾರ್ಕ್ ಅಭಿವೃದ್ಧಿಗೆ 3000 ಎಕೆರೆ ಲಭ್ಯವಿದ್ದು, ಈ ಪೈಕಿ 1000 ಎಕರೆ ಮೀಸಲಿರಿಸಿ, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು.
ಗದಗ- ಯಲ್ಲೋಗಿ, ಗದಗ ಬೆಟಗೇರಿ ವರ್ತುಲ ರಸ್ತೆ ಪೂರ್ಣಗೊಳಿಸುವುದು ಹಾಗೂ ಹಾವೇರಿಯಲ್ಲಿ ಫುಡ್ ಪಾರ್ಕ್ ಸ್ಥಾಪನೆಗೆ ಕ್ರಮ, ಮೆಕ್ಕೆ ಜೋಳ ಇಳುವರಿ ಹೆಚ್ಚಾಗಿದ್ದು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಮೆಕ್ಕೆಜೋಳ ವಿತರಣೆಗೆ ಕ್ರಮ ಕೈಗೊಳ್ಳಬೇಕು, ಬೆಂಬಲ ಬೆಲೆ ನೀಡಬೇಕು.
14.ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ 6000 ಎಕರೆ ಭೂಮಿ ನೀಡಲು ರೈತರು ಸಿದ್ಧರಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು ಎನ್ನುವ ಮನವಿ ಜೊತೆಗೆ ಕೇಂದ್ರದಲ್ಲಿ ಬಾಕಿ ಇರುವ ಯೋಜನೆಗಳಿಗೆ ಶೀಘ್ರ ಮಂಜೂರಾತಿ, ಹಣ ಬಿಡುಗಡೆ ಮಾಡಿಸಲು ಕ್ರಿಯಾಶೀಲವಾಗಿ ಕೆಲಸ ಮಾಡುವುದಾಗಿ ಸಂಸದರು ಭರವಸೆ ನೀಡಿದರು.
15.ಬೆಂಗಳೂರಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಾಜ್ಯದ ಸಂಸದರು ಹಾಗೂ ರಾಜ್ಯ ಸಭಾ ಸದಸ್ಯರು ಸಕ್ರಿಯವಾಗಿ ತೊಡಗಿಕೊಳ್ಳಲು ಅವಕಾಶ ನೀಡಬೇಕು. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.