ಬೆಂಗಳೂರು:ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಜಲಾವೃತವಾಗಿದ್ದು, ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಐಟಿ ಕಂಪನಿಗಳು ಟೀಕೆ ಮಾಡಿವೆ. ಇದರಿಂದ ಬ್ರ್ಯಾಂಡ್ ಬೆಂಗಳೂರು ಕುಸಿಯುತ್ತಿದ್ದು, ಇದಕ್ಕೆ ವಿಪಕ್ಷಗಳೇ ಕಾರಣ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬ್ರ್ಯಾಂಡ್ ಬೆಂಗಳೂರನ್ನು ಹಾನಿ ಮಾಡಲು ಪ್ರಯತ್ನಿಸುತ್ತಿವೆ. ನಗರದ ಕೆಲವು ಭಾಗಗಳು ಮಾತ್ರ ಮಳೆ ನೀರಿನಿಂದ ಉಂಟಾದ ಪ್ರವಾಹಕ್ಕೆ ಜಲಾವೃತವಾಗಿದೆ. ಬೆಳ್ಳಂದೂರಿನಲ್ಲಿ ಐಟಿ ಪಾರ್ಕ್, ಕೆರೆ ಒತ್ತುವರಿ ಮಾಡಿದವರು ಯಾರು? ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಪ್ರಶ್ನಿಸಿದರು.
ಪ್ರವಾಹದ ವೇಳೆ ದೋಸೆ ಪ್ರಚಾರ ಮಾಡಿದ್ದರ ವಿರುದ್ಧ ವ್ಯಕ್ತವಾದ ಟೀಕೆಗೆ ಉತ್ತರಿಸಿ, ದೋಸೆ ಮಾತ್ರವಲ್ಲ, ಎಲೆಕ್ಟ್ರಿಕ್ ಅಂಗಡಿ ಉದ್ಘಾಟನೆಗೆ ಕರೆದರೂ ನಾನು ಹೋಗುತ್ತೇನೆ. ಜೊತೆಗೆ ಯಾವುದೇ ಅಂಗಡಿ ಉದ್ಘಾಟನೆಗೆ ಆಹ್ವಾನಿಸಿದರೂ ಜನಪ್ರತಿನಿಧಿಯಾಗಿ ಅಲ್ಲಿಗೆ ಹೋಗುವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.