ಬೆಂಗಳೂರು : ಕೋಲಾರ, ಶ್ರೀನಿವಾಸಪುರ, ಮುಳುಬಾಗಿಲು ರೈತರನ್ನು ಏಕಾಏಕಿ ಓಕ್ಕಲೆಬ್ಬಿಸುತ್ತಿರುವುದಾಗಿ ಆರೋಪಿಸಿ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಹಾಗೂ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಬೆಂಬಲಿಗರೊಂದಿಗೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಪೋಸ್ಟರ್ಗಳನ್ನು ಹಿಡಿದು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹಲವು ಗ್ರಾಮಗಳಲ್ಲಿ ತಿಂಗಳ ಹಿಂದೆ ಅರಣ್ಯ ಇಲಾಖೆಯು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು. ಒಟ್ಟು 560 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿತ್ತು. ಸುಮಾರು 25 ಕ್ಕೂ ಹೆಚ್ಚು ಜೆಸಿಬಿಗಳ ಮೂಲಕ 200 ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಅರಣ್ಯ ಭೂಮಿಯನ್ನು ವಶಕ್ಕೆ ಪಡೆದಿದ್ದರು. ಇದಕ್ಕೆ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಬೆಂಬಲಿಗರು ಅಡ್ಡಿಪಡಿಸಿದ್ದರು. ಈ ಸಂಬಂಧ ಸಂಸದರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳೂ ದಾಖಲಾಗಿತ್ತು.
ನಿನ್ನೆ ಪ್ರತಿಭಟನೆ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ, "ಕಳೆದ 50 ವರ್ಷಗಳಿಂದ ವಾಸವಿದ್ದ ರೈತರು ತೋಟಗಳನ್ನು ನಿರ್ಮಾಣ ಮಾಡಿದ್ರು. ತಮ್ಮ ಮಕ್ಕಳನ್ನು ಸಾಕಿದಂತೆ ಮಾವಿನ ಮರಗಳನ್ನು ಬೆಳೆಸಿದ್ರು. ಅಧಿಕಾರಿಗಳು ಈಗ ಮಾವಿನ ಮರ, ತರಕಾರಿಗಳನ್ನು ನಾಶ ಮಾಡಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ" ಎಂದು ಆರೋಪಿಸಿದರು.
ಪಹಣಿ ಇದೆ, ಬೋರ್ವೆಲ್ ತೆಗೆಸಲಾಗಿದೆ. ಆದರೂ ನೋಟಿಸ್ ನೀಡದೇ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮುಂಚೆ ಅರಣ್ಯ ಭೂಮಿ ಎಂದು ಹೇಳಿರಲಿಲ್ಲ. ಶ್ರೀನಿವಾಸಪುರದ ಚುನಾವಣೆ ಫಲಿತಾಂಶ ಹಿನ್ನೆಲೆ ಇಬ್ಬರು ನಾಯಕರ ನಡುವೆ ಸಂಘರ್ಷ ನಡೆಯುತ್ತಿದ್ದು, ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅದು ನಿಲ್ಲಬೇಕು ಎಂದರು.