ಬೆಂಗಳೂರು :ಎಸ್.ಐ.ಟಿ ವಿಚಾರಣೆ ನೆಪದಲ್ಲಿ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆಯುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
ಶಾಸಕ ರೋಷನ್ ಬೇಗ್ ಅವರನ್ನು ಎಸ್.ಐ.ಟಿ ವಶಕ್ಕೆ ಪಡೆದಿರುವ ಸಂಬಂಧ ರಮಡಾ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಸಿಎಂ ಎಸ್.ಐ.ಟಿಯನ್ನು ಬಳಸಿಕೊಂಡು ದುರುದ್ದೇಶದಿಂದ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನಾವು ಶಾಸಕರಿಗೆ ಅನ್ಯಾಯವಾದಾಗ ಧ್ವನಿಯೆತ್ತುತ್ತೇವೆ. ಸುಧಾಕರ್ ಮೇಲೆ ಹಲ್ಲೆಯಾದಗಲೂ ನಾವು ಅವರ ಪರವಾಗಿದ್ದೆವು, ಈಗಲೂ ಬೇಗ್ ಪರ ಇದ್ದೇವೆ ಎಂದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಹಿರಿಯ ಶಾಸಕರ ವಿರುದ್ಧ ಎಸ್.ಐ.ಟಿ. ಅಸ್ತ್ರ ಪ್ರಯೋಗಿಸಿರುವುದನ್ನು ಖಂಡಿಸುತ್ತೇವೆ. ಎಸ್.ಐ.ಟಿ. ಜುಲೈ 19ರಂದು ವಿಚಾರಣೆಗೆ ಹಾಜರಾಗಬೇಕೆಂದು ಮೊದಲೇ ನೋಟೀಸ್ ನೀಡಿದೆ. ಹಾಗಿದ್ದಾಗ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಅವಶ್ಯಕತೆ ಏನಿತ್ತು ಎಂಬುದನ್ನು ಸಿಎಂ ತಿಳಿಸಬೇಕು. ಎಸ್.ಐ.ಟಿ ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ವಿರೋಧವಿಲ್ಲ. ಇನ್ನು ಅವರ ರಾಜೀನಾಮೆ ಅಂಗೀಕರಿಸಿಲ್ಲ. ಅವರ ಹುಟ್ಟುಹಬ್ಬದ ನಿಮಿತ್ತ ಬೇರೆಡೆ ತೆರಳುವ ವೇಳೆ ವಶಕ್ಕೆ ಪಡೆದಿದ್ದಾರೆ. ಸ್ಪೀಕರ್ ಗಮನಕ್ಕೆ ತರದೆ ಎಸ್.ಐ.ಟಿ ವಶಕ್ಕೆ ಪಡೆದಿದೆ. ಈ ಮೂಲಕ ಶಾಸಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸ್ಪೀಕರ್ ಕೂಡಲೇ ರೋಷನ್ ಬೇಗ್ ರಕ್ಷಣೆಗೆ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.