ಬೆಂಗಳೂರು:ನೂತನ ಸಚಿವರಿಗೆ ಖಾತೆ ಹಂಚಿಕೆ ಅಸಮಾಧಾನ ತಂದಿದ್ದು, ಸಚಿವ ಡಾ.ಸುಧಾಕರ್ ನಿವಾಸದಲ್ಲಿ ಸಭೆ ನಡೆಸಿದ್ರೆ, ಇತ್ತ ಸಚಿವ ಸ್ಥಾನ ವಂಚಿತರು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು.
ಜಾರಕಿಹೊಳಿ ನಿವಾಸದಲ್ಲಿ ರೇಣುಕಾಚಾರ್ಯ & ಟೀಂ ಸಭೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಸುರಪುರ ಶಾಸಕ ರಾಜೂಗೌಡ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್ ಮತ್ತು ಮಾಜಿ ಶಾಸಕರಾದ ಸುರೇಶ್ ಗೌಡ ನಾಗರಾಜ್ ಸಭೆ ನಡೆಸಿದರು.
ಓದಿ:ಅಸಮಾಧಾನಕ್ಕೆ ಮಣಿದ ಯಡಿಯೂರಪ್ಪ: ಮೂವರು ಸಚಿವರ ಖಾತೆ ಬದಲಾವಣೆ!?
ಭೋಜನ ಕೂಟದ ನೆಪದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರು ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗದೆ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ರೇಣುಕಾಚಾರ್ಯ ದೆಹಲಿಗೂ ಭೇಟಿ ನೀಡಿ ವರಿಷ್ಠರಿಗೆ ದೂರು ನೀಡಿ ಬಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಂತರ ಜಾರಕಿಹೊಳಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷದಲ್ಲಿ ಮತ್ತೆ ಬಂಡಾಯದಂತಹ ಚಟುವಟಿಕೆಯ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಗೂ ಮೊದಲೇ ಜಾರಕಿಹೊಳಿ ನಿವಾಸದಲ್ಲಿ ಇದೇ ತಂಡ ಕೆಲವರೊಂದಿಗೆ ಸೇರಿ ಭೋಜನ ಕೂಟದ ನೆಪದಲ್ಲಿ ಸಭೆ ನಡೆಸಿತ್ತು. ಅಲ್ಲಿ ಸಚಿವ ಸ್ಥಾನದ ಬೇಡಿಕೆಗಿಂತಲೂ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಬಾರದು ಎನ್ನುವ ಒತ್ತಡವನ್ನು ತರಲಾಗಿತ್ತು. ಆದರೆ ಈಗ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಸಿಕ್ಕಿದ್ದು, ಅಸಮಾಧಾನಿತರು ಮತ್ತೆ ಸಭೆ ನಡೆಸುವ ಮೂಲಕ ಭಿನ್ನರಾಗಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.