ಬೆಂಗಳೂರು :ಬಿಜೆಪಿಯ ಯಾವೊಬ್ಬ ಶಾಸಕನೂ ಕಾಂಗ್ರೆಸ್ ಸಂಪರ್ಕದಲ್ಲಿಲ್ಲ. ಆದರೆ, ಕಾಂಗ್ರೆಸ್ನ ಹಲವು ಶಾಸಕರೇ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹತ್ತಾರು ಜನ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಮೋದಿ ಯೋಚನೆ, ಯೋಜನೆಗಳು, ಮೂರು ವರ್ಷ ಕೋವಿಡ್ ನಡುವೆ ಆಗಿರುವ ಅಭಿವೃದ್ಧಿ, ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದ ಅಭಿವೃದ್ಧಿ ನೋಡಿ ಕಾಂಗ್ರೆಸ್ನಲ್ಲಿ ಭವಿಷ್ಯವಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ನವರು ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಅಧಿಕಾರದ ಹಗಲು ಗನಸು ಕಾಣುತ್ತಿದ್ದಾರೆ. ಪ್ರಚಲಿತ ರಾಜಕಾರಣ ವಿದ್ಯಮಾನಗಳಿಂದ ಭಯಭೀತರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸ್ಪಷ್ಟ ಎಂದು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರು ಅತಂತ್ರ ಸೃಷ್ಟಿ ಮಾಡಲು ಹೊರಟಿದ್ದಾರೆ. ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ಯಾವೊಬ್ಬರೂ ಕಾಂಗ್ರೆಸ್ ಸಂಪರ್ಕದಲ್ಲಿ ಇಲ್ಲ ಎಂದರು.
ಇದನ್ನೂ ಓದಿ: ಹೈಕಮಾಂಡ್ ಒಪ್ಪಿದ್ರೆ ಕಾಂಗ್ರೆಸ್ನ 16 ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ ಹೊಸ ಬಾಂಬ್!
ನಮ್ಮದು ಶಿಸ್ತಿನ ಪಕ್ಷ, ನಮ್ಮಲ್ಲಿ ಎಲ್ಲರೂ ಶಿಸ್ತು ಅನುಸರಿಸಬೇಕು. ಎಲ್ಲಾ ಎಚ್ಚರಿಕೆ ನೀಡಿದರೂ ಶಿಸ್ತು ಉಲ್ಲಂಘನೆ ಸಹಿಸಲ್ಲ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಬಹಿರಂಗವಾಗಿ ಹೇಳಿಕೆ ನೀಡಬಾರದು. ಮಾಧ್ಯಮಗಳ ಮೂಲಕ ಮಾತನಾಡುವವರನ್ನೂ ಕರೆಸಿ ಈ ಬಗ್ಗೆ ಮಾತನಾಡುತ್ತೇನೆ.
ಈಗಾಗಲೇ ಪದೇಪದೆ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ರಾಜ್ಯದ ಶಿಸ್ತು ಸಮಿತಿ ಮೂಲಕ ಸ್ಪಷ್ಟೀಕರಣ ಪಡೆದು ಕೇಂದ್ರಕ್ಕೆ ವರದಿ ನೀಡಲಾಗಿದೆ. ಅಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ನೋಟಿಸ್ ಪಡೆದವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಮುಂದೆ ಯಾರೇ ಶಿಸ್ತು ಉಲ್ಲಂಘಿಸಿದರೂ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಲಿದೆ. ವರಿಷ್ಠರು ಮುಂದೇನು ಮಾಡಬೇಕು ಎಂದು ನಿರ್ಧರಿಸಲಿದ್ದಾರೆ ಎಂದರು.
ಉಸ್ತುವಾರಿಗೆ ಅಸಮಾಧಾನವಿಲ್ಲ: ಜಿಲ್ಲಾ ಉಸ್ತುವಾರಿ ನೇಮಕದ ವಿಚಾರದಲ್ಲಿ ಈ ಬಾರಿ ಹೊಸ ನೀತಿ ಅನುಸರಿಸಲಾಗಿದೆ. ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯದಲ್ಲಿಯೂ ಇದೇ ರೀತಿಯ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ನಮ್ಮ ರಾಷ್ಟ್ರೀಯ ನಾಯಕರ ಸೂಚನೆಯಂತೆ ಬೊಮ್ಮಾಯಿ ಈ ರೀತಿ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಹಿರಿಯ ಸಚಿವರಾದ ಆರ್. ಅಶೋಕ್, ಜೆಸಿ ಮಾಧುಸ್ವಾಮಿ ಅವರಿಗೆ ದೊಡ್ಡ ಜವಾಬ್ದಾರಿ ಇದೆ. ಎಲ್ಲರೊಂದಿಗೂ ಮಾತುಕತೆ ನಡೆಸಿ ಇದನ್ನು ಮಾಡಲಾಗಿದೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಶಾಸಕರು ಮಾತನಾಡಬೇಕಿಲ್ಲ:ಪಕ್ಷದ ಯಾವುದೇ ಶಾಸಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಸಿಎಂ, ವರಿಷ್ಟರು ಅದನ್ನು ನಿರ್ಧಾರ ಮಾಡಲಿದ್ದಾರೆ. ಹಾಗಾಗಿ, ಯಾರೂ ಮಾತನಾಡುವ ಅಗತ್ಯವಿಲ್ಲ. ನಿಗಮ ಮಂಡಳಿಗೆ ನೇಮಕಾತಿ ಕುರಿತು ಸಭೆ ನಡೆಸಲಾಗಿದೆ. ಸಮಾಲೋಚನೆ ನಡೆದಿದೆ. ಇನ್ನೊಂದು ವಾರದಲ್ಲಿ ಸಿಎಂಗೆ ವರದಿ ಕೊಡಲಿದ್ದೇವೆ. ನಂತರ ನೇಮಕಾತಿ ನಡೆಯಲಿದೆ ಎಂದರು.