ಕರ್ನಾಟಕ

karnataka

ETV Bharat / state

ಡಿಕೆಶಿ ವಿರುದ್ಧ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರ ಕ್ರಮ ಪ್ರಶ್ನಿಸಿ ಯತ್ನಾಳ್ ಮಧ್ಯಂತರ ಅರ್ಜಿ - bjp mla yatnal

ಡಿಕೆಶಿ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಯತ್ನಾಳ್​ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್​ಗೆ ಯತ್ನಾಳ್ ಮಧ್ಯಂತರ ಅರ್ಜಿ
ಹೈಕೋರ್ಟ್​ಗೆ ಯತ್ನಾಳ್ ಮಧ್ಯಂತರ ಅರ್ಜಿ

By ETV Bharat Karnataka Team

Published : Nov 28, 2023, 4:14 PM IST

Updated : Nov 28, 2023, 6:09 PM IST

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಆದೇಶ ಪ್ರಶ್ನಿಸಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ಬುಧವಾರ ನಿಗದಿಪಡಿಸಿತ್ತು. ಈ ನಡುವೆ ಕಳೆದ‌ ಗುರುವಾರ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಡಿ ಕೆ ಶಿವಕುಮಾರ್ ವಿರುದ್ಧ ತನಿಖೆಗೆ ನೀಡಿದ್ದ ಅನುಮತಿಯನ್ನು ಸರ್ಕಾರ ಹಿಂಪಡೆದಿತ್ತು.

ಇದನ್ನು ಪ್ರಶ್ನಿಸಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಯತ್ನಾಳ್, ಶಿವಕುಮಾರ್ ವಿರುದ್ಧದ ಪ್ರಕರಣ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ಮೂಲಕ ಸರ್ಕಾರ ಹೈಕೋರ್ಟ್ ವಿಚಾರಣೆಯನ್ನು ನಿಷ್ಪಲಗೊಳಿಸುವ ಯತ್ನ ಮಾಡುತ್ತಿದೆ. ಸಿಬಿಐ ಶೇ 90 ರಷ್ಟು ವಿಚಾರಣೆ ಪೂರ್ಣಗೊಳಿಸಿದೆ ಎಂದು ಇದೇ ಪ್ರಕರಣದ ವಿಚಾರಣೆ ನಡೆಸಿದ ಏಕ ಸದಸ್ಯಪೀಠ ತಿಳಿಸಿದೆ.‌ ಈ ಹಂತದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಸಿಬಿಐ ತನಿಖೆಯನ್ನು ಮೊಟಕುಗೊಳಿಸುತ್ತಿದೆ. ಆ ಮೂಲಕ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದೆ. ಆದ್ದರಿಂದ ಸರ್ಕಾರದ ನಿರ್ಧಾರಕ್ಕೆ ಸೀಮಿತವಾಗಿ ತಮ್ಮ ವಾದವನ್ನು ಆಲಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಈ ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್​ನ ಹಿರಿಯ ವಕೀಲ ಕಪಿಲ್​ ಸಿಬಲ್​ ವಾದ ಮಂಡಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?ಡಿ.ಕೆ ಶಿವಕುಮಾರ್ ಅವರು ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಈ ವೇಳೆ 8.59 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಸ್ಥಳದಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಇದರ ಬಳಿಕ ಜಾರಿ ನಿರ್ದೇಶನಾಲಯ ಶಿವಕುಮಾರ್ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಿತ್ತು. ಇದನ್ನು ಆಧರಿಸಿ 2019ರ ಸೆಪ್ಟೆಂಬರ್ 3ರಂದು ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು.

ಆನಂತರ 2019ರ ಸೆಪ್ಟೆಂಬರ್ 9ರಂದು ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದರು.

ಇದನ್ನೂ ಓದಿ:ಡಿಕೆಶಿ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದ ಆದೇಶ ರದ್ದು ಕೋರಿ ಅರ್ಜಿ: ಬುಧವಾರ ವಿಚಾರಣೆ

Last Updated : Nov 28, 2023, 6:09 PM IST

ABOUT THE AUTHOR

...view details