ಬೆಂಗಳೂರು:ಶಾಸಕ ಮುನಿರತ್ನ ಅವರು ನನ್ನ ಭೇಟಿಗೆ ಮೊದಲೇ ಅವಕಾಶ ಕೇಳಿದ್ದರೆ ಕೊಡುತ್ತಿದ್ದೆ. ಕಂಬಳ ಕರೆ ಭೂಮಿ ಪೂಜೆ (ಗುದ್ದಲಿಪೂಜೆ) ಕಾರ್ಯಕ್ರಮದ ಬಳಿ ಬಂದು ಸೀನ್ ಕ್ರಿಯೇಟ್ ಮಾಡುವ ಅವಶ್ಯಕತೆ ಇರಲಿಲ್ಲ. ಅವರನ್ನು ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಮಠದ ಸ್ವಾಮೀಜಿಯೇನೂ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಮುನಿರತ್ನ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುನಿರತ್ನ ರಾಜರಾಜೇಶ್ವರಿ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಚರ್ಚೆ ನಡೆಸಿದರು. 'ದ್ವೇಷದ ರಾಜಕಾರಣ' ಎಂದು ಹೇಳಿದರು. ಅದಕ್ಕೆ ನಾನು ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕರ ಅನುದಾನಕ್ಕೇಕೆ ಕತ್ತರಿ ಹಾಕಿದ್ದರು? ಹೋಗಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನೇ ಕೇಳಿ ನೋಡಿ. ಕನಕಪುರಕ್ಕೆ ಬಂದಿದ್ದ ವೈದ್ಯಕೀಯ ಕಾಲೇಜನ್ನು ಹೇಗೆ ತೆಗೆದರು?. ಅದನ್ನು ಯಾವ ರಾಜಕಾರಣ ಎಂದು ಕರೆಯುತ್ತಾರೆ ಎಂದು ಮುನಿರತ್ನರಿಗೆ ಕೇಳಿದ್ದಾಗಿ ತಿಳಿಸಿದರು.
ಅದಕ್ಕೆ ಮುನಿರತ್ನ, ನಾನು ಚಿಕ್ಕವನು. ಇದಕ್ಕೆಲ್ಲ ನನ್ನನ್ನು ಮುಂದೆ ಬಿಡಬೇಡಿ ಎಂದರು. ಇನ್ನೂ ಅನೇಕ ವಿಚಾರಗಳು ಚರ್ಚೆಯಾದವು. ಅದನ್ನೆಲ್ಲಾ ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ. ನಿಮಗೆ ಅದೆಲ್ಲಾ ಅರ್ಥವಾಗಿರುತ್ತದೆ. ಕಾಲಿಗೆ ಬೀಳುವುದೆಲ್ಲ ಇಟ್ಟುಕೊಳ್ಳಬೇಡಿ, ಸುಮ್ಮನೆ ಹೊರಡಿ ಎಂದು ಅವರಿಗೆ ಹೇಳಿದೆ ಎಂದರು.
ಸರ್ಕಾರದಿಂದ ಕಾಮಗಾರಿಗಳ ತನಿಖೆ ನಡೆಸಲಾಗುವುದೇ ಎನ್ನುವ ಪ್ರಶ್ನೆಗೆ, ಈಗಾಗಲೇ ತನಿಖೆ ನಡೆಯುತ್ತಿದೆಯಲ್ಲಾ. ಯಾರು ಸರಿಯಾಗಿ ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಬಿಡುಗಡೆ ಮಾಡಲಾಗುವುದು. ಬೊಮ್ಮಾಯಿ ಸಾಹೇಬರು ವಿಧಾನಸಭೆಯಲ್ಲಿ ವರದಿ ನೀಡಿ, ಹೇಳಿಕೆ ನೀಡಿದ್ದರು. ಮುನಿರತ್ನ ಸಹ ನನ್ನ ಕ್ಷೇತ್ರದಲ್ಲಿ ಅನ್ಯಾಯ ನಡೆದಿದೆ ಎಂದು ಪತ್ರ ಬರೆದಿದ್ದರು. ಅದನ್ನೆಲ್ಲಾ ತನಿಖೆಗೆ ನೀಡಿದ್ದೇವೆ. ಬೊಮ್ಮಾಯಿ ಹಾಗೂ ಇವರು ಹೇಳಿದ್ದಕ್ಕೆ ಲೋಕಾಯುಕ್ತ ತನಿಖೆಗೆ ನೀಡಿದ್ದೇವೆ. ವರದಿ ಬಂದ ಬಳಿಕ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳುತ್ತೇವೆ ಎಂದು ತಿಳಿಸಿದರು.
ಕಾಮಗಾರಿಗಳ ಪಟ್ಟಿ ತಂದುಕೊಡುವುದಾಗಿ ಮುನಿರತ್ನ ಅವರು ಹೇಳಿರುವ ಬಗ್ಗೆ ಕೇಳಿದಾಗ, ಯಾವ ಕಾಮಗಾರಿ, ಯಾವುದು ಆದ್ಯತೆಯ ಮೇಲೆ ನಡೆಯಬೇಕು, ಯಾವ ಕೆಲಸ ಎಂದು ಪಟ್ಟಿ ತಂದುಕೊಡಿ ಎಂದು ಹೇಳಿ ಕಳಿಸಿದ್ದೇನೆ ಎಂದು ಹೇಳಿದರು.
ಡಿ.ಕೆ.ಸಹೋದರರು ಏನು ಮಾಡಿಕೊಂಡು ಬಂದಿದ್ದಾರೋ ನಾನು ಅದನ್ನೇ ಮಾಡುತ್ತಿದ್ದೇನೆ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ ನಾನು ಎಕ್ಸಿಬಿಟರ್, ನಟ, ನಿರ್ಮಾಪಕ ಅಲ್ಲ. ಆದರೆ ನಮ್ಮಲ್ಲಿ ಹಾಗೂ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಹಳಷ್ಟು ಜನ ನಟರು, ನಿರ್ಮಾಪಕರು, ವಿತರಕರು ಸೇರಿಕೊಂಡು ಬಿಟ್ಟಿದ್ದಾರೆ. ನಾನು ಈ ಹಿಂದೆ ಪ್ರದರ್ಶಕ ಆಗಿದ್ದೆ, ಈಗಲ್ಲ ಎಂದು ತಿಳಿಸಿದರು.