ಬೆಂಗಳೂರು : ರಾಜ್ಯ ಸಚಿವ ಸಂಪುಟದ ಹದಿನೈದು ಸಚಿವರ ವಿರುದ್ಧ ಕಿಡಿ ಕಾರುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರಿಗೆ ದೆಹಲಿಗೆ ಬುಲಾವ್ ಬಂದಿದೆ. ಕರ್ನಾಟಕ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಈ ಬುಲಾವ್ ನೀಡಿದ್ದು, ಸೋಮವಾರ ಈ ಕುರಿತಂತೆ ರೇಣುಕಾಚಾರ್ಯ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಅರುಣ್ ಸಿಂಗ್ ಅವರ ಜೊತೆಗಿನ ಮಾತುಕತೆಯ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ಫೆ. 7 ಅಥವಾ 8ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ. ಉನ್ನತ ಮೂಲಗಳ ಪ್ರಕಾರ, ಜನವರಿ 31ರಂದು ರೇಣುಕಾಚಾರ್ಯ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಅರುಣ್ ಸಿಂಗ್, ಸಚಿವರ ವಿರುದ್ಧ ಕಿಡಿ ಕಾರುತ್ತಿರುವುದಕ್ಕೆ ಕಾರಣ ಕೇಳಿದ್ದಾರೆ. ಈ ಸಂದರ್ಭದಲ್ಲಿ ಸ್ವಪಕ್ಷದ ಕೆಲ ಸಚಿವರು ಮತ್ತು ವಲಸೆ ಬಂದು ಸಚಿವರಾಗಿರುವ ಕೆಲವರ ವರ್ತನೆಯ ಬಗ್ಗೆ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸರ್ಕಾರದಲ್ಲಿರುವ ಬಹುತೇಕ ಸಚಿವರು ತಮ್ಮ ವ್ಯಾಪಾರ, ವ್ಯವಹಾರಕ್ಕಾಗಿ ಇರುವಂತೆ ಭಾಸವಾಗುತ್ತಿದೆ. ಇವರಿಗೆ ಶಾಸಕರ ಬಗ್ಗೆ ಕಿಂಚಿತ್ತು ಗೌರವವೂ ಇಲ್ಲ, ಸರ್ಕಾರಕ್ಕೆ ಗೌರವ ತರುವ, ಆ ಮೂಲಕ ಪಕ್ಷಕ್ಕೆ ಶಕ್ತಿ ತರುವ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ತಮಗೆ ಬೇಕಾದವರ ಮೂಲಕ ವ್ಯವಹಾರದಲ್ಲಿ ಅಪಾರ ಪ್ರಮಾಣದ ಹಣ ತೊಡಗಿಸುತ್ತಿರುವ ಹಲವು ಸಚಿವರು ಇದೇ ಕಾರಣಕ್ಕಾಗಿ ಸರ್ಕಾರವನ್ನು ದಲ್ಲಾಳಿಗಳ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿದ್ದಾರೆ. ಕೇಳಿದರೆ ಸರ್ಕಾರ ಬರಲು ತಾವು ಬಂಡವಾಳ ಹೂಡಿರುವುದಾಗಿ ಉಡಾಫೆಯ ಮಾತನಾಡುತ್ತಾರೆ. ಆ ಮೂಲಕ ತಾವೇನು ಮಾಡಿದರೂ ನಡೆಯುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.