ಬಿಜೆಪಿ ಬಿಡಲ್ಲ, ಸಿಎಂ ಭೇಟಿಯಾಗಿದ್ದು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣಿಗೇರಲು ಸಿದ್ದ: ಬಿಜೆಪಿ ಶಾಸಕ ಗೋಪಾಲಯ್ಯ ಬೆಂಗಳೂರು: ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣಿಗೇರಲು ಸಿದ್ದವಿದ್ದೇನೆ ಎಂದು ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುತ್ತಾರೆ ಎನ್ನುವ ವದಂತಿ ಹರಡಿದೆ. ಹಾಗಾಗಿ ನನಗೆ ನಿನ್ನೆಯಿಂದ ಸ್ವೀಕರಿಸಲು ಸಾಧ್ಯವಾಗದಷ್ಟು ದೂರವಾಣಿ ಕರೆಗಳು ಬರುತ್ತಿದೆ. ಆದರೆ, ನಾನು ಯಾರನ್ನು ಭೇಟಿ ಆಗಿಲ್ಲ. ನಿನ್ನೆ ಸಂಜೆ (ಗುರುವಾರ) ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ ಎಂದು ವರದಿಯಾಗಿದೆ. ಆದರೆ, ನಾನು ಭೇಟಿಯಾಗಿದ್ದು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು.
ಕಳೆದ ಹತ್ತು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲಿ ಒಂದು ಮಾತು ಕೊಟ್ಟಿದ್ದೇನೆ. ಕ್ಷೇತ್ರದ ಜನ ನನಗೆ ಮತ ಕೊಟ್ಟಿದ್ದಾರೆ ಬಿಜೆಪಿಗೆ ಬಂದ ನಂತರ ಪಕ್ಷ ಗೌರವ ಸ್ಥಾನಮಾನ ಕೊಟ್ಟಿದೆ ಐದು ವರ್ಷ ವಿರೋಧ ಪಕ್ಷದಲ್ಲಿ ಕೆಲಸ ಮಾಡುತ್ತೇವೆ. ಆ ಶಕ್ತಿ ನಮಗೆ ಇದೆ. ದಯಮಾಡಿ ನಮ್ಮ ತೇಜೋವಧೆ ಮಾಡುವ ಕೆಲಸವನ್ನು ಮಾಡಬೇಡಿ ನಾವು ಭಾರತೀಯ ಜನತಾ ಪಕ್ಷದಲ್ಲೇ ಉಳಿಯುತ್ತೇವೆ.
ನನಗೂ ಒಂದು ಲಕ್ಷ ಜನ ಮತ ಹಾಕಿದ್ದಾರೆ, ಏನು ಗೋಪಾಲಯ್ಯ ಈ ರೀತಿ ಮಾಡಿದಿರಿ ಎಂದು ಜನ ಮಾತನಾಡುವ ಸ್ಥಿತಿಗೆ ತರಬೇಡಿ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ, ಬಿಜೆಪಿಯಲ್ಲೇ ನಾವು ಇರುತ್ತೇವೆ. ಮೋದಿ ನಾಯಕತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎನ್ನುವ ವಿಶ್ವಾಸ ಇದೆ ಎಂದರು.
ನಂತರ ಮಾತನಾಡಿದ ಆರ್.ಆರ್. ನಗರ ಶಾಸಕ ಮುನಿರತ್ನ, ಎಸ್ ಟಿ ಸೋಮಶೇಖರ್ ಸೇರಿ ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಒಟ್ಟಾಗಿಯೇ ಇರುತ್ತೇವೆ ಯಾರು ಕೂಡ ಇಲ್ಲಿಂದ ಹೋಗುವುದಿಲ್ಲ ಯಾವುದೇ ಕಾರಣಕ್ಕೂ ನಾವು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. 17 ಜನ ಬಂದ ಶಾಸಕರ ಬಗ್ಗೆ ಹೆಚ್ಚಿನ ಚರ್ಚೆ ಇದೆ. ಶುಕ್ರವಾರ ಬೆಳಗ್ಗೆ ಬೈರತಿ ಬಸವರಾಜ್ ನನಗೆ ಕರೆ ಮಾಡಿದ್ದರು. ನಾನು ನಗರದ ಹೊರಗಿದ್ದೇನೆ. ಮಾಧ್ಯಮಗಳ ಮೂಲಕ ನನ್ನ ಪರವಾಗಿ ಮಾತನಾಡು ಎಂದಿದ್ದಾರೆ. ಎಂತಹ ಪರಿಸ್ಥಿತಿಯಲ್ಲಿಯೂ ನಾನು ಕಾಂಗ್ರೆಸ್ ಸೇರುವುದಿಲ್ಲ ಎಂದು ನನ್ನ ಪರವಾಗಿ ನೀನು ಹೇಳು ಎಂದಿದ್ದಾರೆ.
ಬೈರತಿ ಬಸವರಾಜ್, ನಾನು, ಗೋಪಾಲಯ್ಯ ಯಾರೂ ಕೂಡ ಬಿಜೆಪಿಯನ್ನು ಬಿಡುವುದಿಲ್ಲ, ಕಾಂಗ್ರೆಸ್ಗೆ ಹೋಗುವ, ಎಂತಹ ಪರಿಸ್ಥಿತಿಯಲ್ಲಿಯೂ ನಾವು ಬಿಜೆಪಿಯನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ನಮಗೆ ಎಷ್ಟು ತೊಂದರೆಯನ್ನಾದರೂ ಕೊಡಲಿ ನಾವು ಬಿಜೆಪಿಯಲ್ಲಿಯೇ ಇರುತ್ತೇವೆ ಎಂದರು.
ಎಸ್ ಟಿ ಸೋಮಶೇಖರ್ ಸೇರಿ ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಒಟ್ಟಾಗಿಯೇ ಇರುತ್ತೇವೆ ಯಾರೂ ಕೂಡ ಇಲ್ಲಿಂದ ಹೋಗುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಈ ದೇಶಕ್ಕೆ ಕೊಡಬೇಕಾಗಿದೆ. ಈ ದೇಶದ ಭದ್ರತೆಗೆ ಪ್ರಧಾನಿ ಮೋದಿ ಅವರ ಅವಶ್ಯಕತೆ ಇದೆ ಅದಕ್ಕಾಗಿ ನಾವು ಕೆಲಸ ಮಾಡುತ್ತೇವೆ ಎಂದು ಮುನಿರತ್ನ ಖಡಕ್ ಹೇಳಿಕೆಯನ್ನೇ ನೀಡಿದ್ದಾರೆ.
ಇದನ್ನೂ ಓದಿ:ಯಾರೂ ಪಕ್ಷ ಬಿಡಲ್ಲ, ಸಣ್ಣಪುಟ್ಟ ಗೊಂದಲ ಸರಿಪಡಿಸುತ್ತೇವೆ: ಬಿಎಸ್ವೈ