ಬೆಂಗಳೂರು:ರಾಮನಗರ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ ಪ್ರಯತ್ನಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪರೋಕ್ಷ ಬೆಂಬಲ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು ಬೆಂಗಳೂರಿನ ಸುತ್ತಮುತ್ತಲಿನ ನಗರ, ಗ್ರಾಮಗಳನ್ನು ಸೇರಿಸಿ ಎನ್‌ಸಿಆರ್ ಮಾಡುವುದು ಸೂಕ್ತ. ಇದರಲ್ಲಿ ರಾಮನಗರ, ಕೋಲಾರ, ತುಮಕೂರು, ಬೆಂಗಳೂರಿನ ಭಾಗಗಳನ್ನೂ ಸೇರಿಸಲಿ. ಈ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ದೆಹಲಿ ಸುತ್ತಮುತ್ತ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್‌ಸಿಆರ್) ಇದೆ. ಎನ್‌ಸಿಆರ್ ಅಂದ್ರೆ ಇದಕ್ಕೆ ದೆಹಲಿ ಮತ್ತು ಗುರುಗ್ರಾಮ, ನೊಯ್ಡಾ ಸೇರಿಕೊಂಡಿದೆ. ಅಲ್ಲೇನೇ ಅಭಿವೃದ್ಧಿ ಮಾಡಿದರೂ ಎನ್‌ಸಿಆರ್ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುತ್ತಾರೆ. ನಮ್ಮ ರಾಜ್ಯದಲ್ಲೂ ಕರ್ನಾಟಕ ಕ್ಯಾಪಿಟಲ್ ರೀಜನ್ (ಕೆಸಿಆರ್) ಮಾಡಲಿ. ಬೆಂಗಳೂರು ಬೆಳೆಯಬೇಕು ಅಂದ್ರೆ ಅದರ ಸುತ್ತಮುತ್ತಲ ಪ್ರದೇಶಗಳೂ ಅಭಿವೃದ್ಧಿ ಆಗಬೇಕು. ಈ ನಿರ್ಧಾರ ರಾಜಕೀಯ ದೃಷ್ಟಿಯಿಂದ ಕೈಗೊಳ್ಳದೇ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಲಿ ಎಂದು ತಿಳಿಸಿದರು.
ನವಿಲು ಗರಿ ಇಟ್ಟುಕೊಂಡಿರುವವರ ವಿರುದ್ಧವೂ ದಾಳಿ ಮಾಡಿ: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ. ನವಿಲು ಗರಿಗಳನ್ನು ಇಟ್ಟುಕೊಂಡಿರುವ ದರ್ಗಾ, ಮಸೀದಿಗಳ ಮೇಲೂ ದಾಳಿ ಮಾಡಿ ಕೇಸ್ ಹಾಕಿ. ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತೆ. ಈ ಸಂಬಂಧ ಸರ್ಕಾರಕ್ಕೆ ನಾವು ಪತ್ರ ಬರೆದು ಆಗ್ರಹಿಸುತ್ತೇವೆ. ಸತ್ತ ಪ್ರಾಣಿಗಳ ಚರ್ಮ ಇಟ್ಕೊಳ್ಳುವುದು ನಮ್ಮ ಸಾಧು ಸಂತರು ಮೊದಲಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ. ಸಲ್ಮಾನ್ ಖಾನ್ ಥರ ಕೃಷ್ಣಮೃಗ ಬೇಟೆಯಾಡಿ ಅದರ ಚರ್ಮ ಬಳಸಲ್ಲ. ಕಾನೂನು ಪಾಲಿಸಿದರೆ 100% ಪಾಲಿಸಿ ಎಂದು ಅರವಿಂದ ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದರು.