ಬೆಂಗಳೂರು: ಸದಸ್ಯರು ಕೇಳುವ ಪ್ರಶ್ನೆ ಯಾರಪ್ಪನದ್ದೂ ಅಲ್ಲ ಎಂದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆ ಸದನದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೋಲಾರ ಜಿಲ್ಲೆಯಲ್ಲಿ ನರೇಗಾದಲ್ಲಿ ನಡೆದಿರುವ ಅವ್ಯವಹಾರ ಕುರಿತು ಸದಸ್ಯ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ನರೇಗಾ ಯೋಜನೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದೆ. ಎಸಿಬಿ ತನಿಖೆಗೆ ಕೊಡಲಾಗಿದೆ. ಅಧಿಕಾರಿಗಳು, ಚುನಾಯಿತರು ಏನು ಅಕ್ರಮ ಮಾಡಿದ್ದಾರೆ ಎಂದು ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. 15 ಜನರಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂದು ಗೊತ್ತಿಲ್ಲ. ಕೆಲವರು ನಿವೃತ್ತಿಯಾಗಿರಬಹುದು, ಆದರೂ ಕ್ರಮ ಖಚಿತ ಎಂದರು.
ಇದನ್ನೂ ಓದಿ:ವಿದ್ಯುತ್ ಬಸ್ ಖರೀದಿ ಇಲ್ಲ, ಗುತ್ತಿಗೆ ಆಧಾರದಲ್ಲಿ ಪ್ರಾಯೋಗಿಕ ಸಂಚಾರವಷ್ಟೇ.. ಸಾರಿಗೆ ಸಚಿವ ಲಕ್ಷ್ಮಣ ಸವದಿ
ಈ ವೇಳೆ ಉಪ ಪ್ರಶ್ನೆಗೆ ನಾರಾಯಣಸ್ವಾಮಿ ಮುಂದಾದರು. ಇದಕ್ಕೆ ಸಾಥ್ ನೀಡಲು ಮುಂದಾದ ಮರಿತಿಬ್ಬೇಗೌಡ, ತಪ್ಪಿತಸ್ಥರ ವಿರುದ್ಧ ಕ್ರಮದ ಘೋಷಣೆ ಮಾಡುವಂತೆ ಸಚಿವರನ್ನು ಆಗ್ರಹಿಸಿದರು. ಪ್ರಶ್ನೆ ಕೇಳಿದ ನಾರಾಯಣಸ್ವಾಮಿ ಅವರಿಗೆ ಅವಕಾಶ ನೀಡದೇ ಮಾತು ಮುಂದುವರೆಸಿದ್ದರಿಂದ ನಾರಾಯಣಸ್ವಾಮಿ ಮತ್ತು ಮರಿತಿಬ್ಬೇಗೌಡರ ನಡುವೆ ನೇರ ವಾಗ್ದಾಳಿ ನಡೆಯಿತು. ನನ್ನ ಪ್ರಶ್ನೆ ನಾನು ಉತ್ತರ ಪಡೆಯುತ್ತೇನೆ, ನೀವೇಕೆ ಅಡ್ಡಿಪಡಿಸುತ್ತೀರಿ ಎಂದು ಮರಿತಿಬ್ಬೇಗೌಡರ ಮಧ್ಯಪ್ರವೇಶಕ್ಕೆ ನಾರಾಯಣಸ್ವಾಮಿ ಕಿಡಿಕಾರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ಪ್ರಶ್ನೆ ಯಾರಪ್ಪನದ್ದೂ ಅಲ್ಲ, ನಮಗೂ ಮಾತನಾಡುವ ಹಕ್ಕಿದೆ ಎಂದರು. ಈ ವೇಳೆ, ಮಧ್ಯಪ್ರವೇಶ ಮಾಡಿದ ಸಚಿವ ಈಶ್ವರಪ್ಪ, ಮರಿತಿಬ್ಬೇಗೌಡರ ಪದ ಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಸದಸ್ಯರಾಗಿ ಹೀಗೆಲ್ಲ ಮಾತನಾಡಬಾರದು ಎಂದರು. ಈ ವೇಳೆ, ಈಶ್ವರಪ್ಪ ವಿರುದ್ಧ ತಿರುಗಿಬಿದ್ದ ಮರಿತಿಬ್ಬೇಗೌಡ, ಸಚಿವರ ಕಾರ್ಯಕ್ಷಮತೆ ಪ್ರಶ್ನಿಸಿದರು. ನೀವು ಯಾವ ರೀತಿ ಅಧಿಕಾರಕ್ಕೆ ಬಂದಿದ್ದೀರಿ ಎಂದು ಇಡೀ ದೇಶಕ್ಕೆ ಗೊತ್ತು ಎಂದರು.
ನನ್ನ ಕಾರ್ಯಕ್ಷಮತೆ ನೋಡಿಯೇ ನನ್ನನ್ನು ಇಲ್ಲಿ ಕೂರಿಸಿದ್ದಾರೆ ಎಂದು ಈಶ್ವರಪ್ಪ ಟಾಂಗ್ ನೀಡಿದರು. ಬಿಜೆಪಿ ಸದಸ್ಯರು ಮತ್ತು ಮರಿತಿಬ್ಬೇಗೌಡರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಮಧ್ಯಪ್ರವೇಶ ಮಾಡಿದ ಉಪಸಭಾಪತಿ ಪ್ರಾಣೇಶ್, ಪ್ರತಿದಿನ ಹೀಗೆ ಮಾತನಾಡಿದರೆ ನಿಮ್ಮ ಹಿರಿತನಕ್ಕೆ ಏನು ಗೌರವ ಬರದಲಿದೆ? ಇದು ಒಳ್ಳೆಯದಲ್ಲ. ಈ ನಡವಳಿಕೆ ಸದನಕ್ಕೆ ಗೌರವ ತರಲಿದೆಯಾ? ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ನಿರ್ದೇಶನ ನೀಡಿದರು.
ನಂತರ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಈಶ್ವರಪ್ಪ, ಎಸಿಬಿ ಮೂಲಕ ವರದಿ ಪಡೆದು, ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಕೈಗೊಳ್ಳುವುದು ಖಚಿತ ಎಂದು ಭರವಸೆ ನೀಡಿದರು.