ಬೆಂಗಳೂರು:ಬಹುಮತ ಸಾಬೀತು ಪ್ರಸ್ತಾಪ ಹಾಗೂ ಮತಕ್ಕೆ ಹಾಕುವ ಕಾರ್ಯಕ್ಕೆ ಅನಗತ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ತಿಳಿಸಿದ್ದಾರೆ.
ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಮನವಿ: ವಿಧಾನ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ವಿಧಾನಸಭೆಯ ಮಹತ್ವದ ಸಮಯವನ್ನು ಸ್ಪೀಕರ್ ಅನಗತ್ಯವಾಗಿ ವ್ಯಯಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಆಡಳಿತ ಪಕ್ಷದಿಂದಲೇ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿ ಇಂದು ದಿನಾಂಕ ನಿಗದಿಪಡಿಸಿದ್ದಾರೆ. ಇದಕ್ಕೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳು ಒಪ್ಪಿಗೆ ಕೂಡ ಸೂಚಿಸಿವೆ. ಆದರೆ ಇಂದು ಕಾನೂನಿನಲ್ಲಿ ಅನುಮತಿ ಇಲ್ಲದೇನೆ, ನಿಯಮಗಳಲ್ಲಿಯೂ ಅನುಮತಿ ಇಲ್ಲದೆಯೇ ಆಡಳಿತ ಪಕ್ಷದವರೇ ಪಾಯಿಂಟ್ ಅಫ್ ಆರ್ಡರ್ನಲ್ಲಿ ಮಾತನಾಡುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಹಾಗೂ ವಿಧಾನಸಭೆಯ ನಿಯಮಗಳಲ್ಲಿ ಅವಕಾಶ ಇಲ್ಲ ಎಂದರು.
ಇಂದು ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನ ಭೇಟಿಯಾಗಿ ಸ್ಪೀಕರ್ ಅವರು ತಾರತಮ್ಯ ಮಾಡುತ್ತಿದ್ದು, ಅವರ ವರ್ತನೆ ನ್ಯಾಯ ಸಮ್ಮತವಾಗಿಲ್ಲ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಅಲ್ಲದೇ ಈ ಹಿಂದೆ ತೋರಿದಂತೆ ವಿಶ್ವಾಸಮತ ಸಾಬೀತು ಪಡಿಸಬೇಕು. ಇದಕ್ಕೆ ಯಾವುದೇ ಅಡೆತಡೆ ಆಗಬಾರದು. ಯಾವುದೇ ತಡೆ ಎದುರಾಗದೇ ವಿಶ್ವಾಸಮತ ಪ್ರಕ್ರಿಯೆ ನಡೆಯಬೇಕು ಎಂದು ಮನವಿ ಮಾಡಿದ್ದೇವೆ ಎಂದು ವಿವರಿಸಿದರು.
ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿ ಬಂದಿದ್ದೇವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲರು ಕಾನೂನು ತಜ್ಞರ ಜೊತೆ ಸಮಾಲೋಚನೆ ಮಾಡುತ್ತೇನೆ ಹಾಗೂ ಅದಾದ ಬಳಿಕ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.