ಬೆಂಗಳೂರು:ಮಾತು ಮಾತಿಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನ ಅವಹೇಳನ ಮಾಡಿ ಮಾತನಾಡುತ್ತಿದ್ದವರು ಈಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೋದಿ ಪರ ನೀಡಿರುವ ತೀರ್ಪಿಗೆ ಏನು ಹೇಳುತ್ತಾರೆ?. ಜನರ ತೀರ್ಪಿನ ವಿರುದ್ಧ ದನಿ ಎತ್ತುತ್ತಾರಾ? ಎಂದು ಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಹೆಸರೇಳದೆ ಪರೋಕ್ಷವಾಗಿ ಹರಿಪ್ರಸಾದ್ ಭಾಷಣಕ್ಕೆ ಬಿಜೆಪಿ ಸದಸ್ಯ ಪ್ರಾಣೇಶ್ ತಿರುಗೇಟು ನೀಡಿದರು.
ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ. ಕೆ ಹರಿಪ್ರಸಾದ್ ಭಾಷಣಕ್ಕೆ ತಿರುಗೇಟು ನೀಡಲು ಬಹುಪಾಲು ಸಮಯವನ್ನು ಬಳಸಿಕೊಂಡರು. ದೂರದೃಷ್ಟಿ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ಮಂಡಿಸಿದ್ದಾರೆ.
ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿಲ್ಲ. ದೇಶದ ದೃಷ್ಟಿಯಿಂದ ಮಂಡಿಸಿದೆ, ಇದರ ಫಲವಾಗಿ ಎಲ್ಲ ಭಾಗದಲ್ಲಿ ಜನ ಮೋದಿ ಕೈಹಿಡಿಯುತ್ತಿದ್ದಾರೆ. ಇವರು ಈಗ ಜನರ ತೀರ್ಪಿನ ವಿರುದ್ಧ ದನಿ ಎತ್ತಲು ಸಾಧ್ಯವಾ?. ಮೋದಿ ವಿರುದ್ಧ ಅವಹೇಳನ ಮಾಡುತ್ತಾರಲ್ಲ ಅವರು ಈಗ ಏನು ಹೇಳುತ್ತಾರೆ? ಎಂದು ಹರಿಪ್ರಸಾದ್ ಹೆಸರನ್ನು ಹೇಳದೆ ಪರೋಕ್ಷವಾಗಿ ಟೀಕಿಸಿದರು.
ಕೊರೊನಾ ಕಾರಣಕ್ಕೆ ಎರಡು ವರ್ಷದಿಂದ ಸಾಕಷ್ಟು ಸಂಕಷ್ಟ ಇದೆ. ದೇಶ ಮೊದಲು ಎನ್ನುವ ಮೋದಿ ಆಶಯಕ್ಕೆ ಜನ ಕೈಹಿಡಿದಿದ್ದಾರೆ. ಅಂತಹ ಮೋದಿ ವಿರುದ್ಧ ನೇರವಾಗಿ ಟೀಕೆ ಮಾಡಿದ್ದು ಸರಿಯೇ?. ಯಾರನ್ನೂ ಚುಚ್ಚಿ ಮಾತನಾಡಲು ನಾನು ಹೋಗಲ್ಲ. ಪ್ರತಿಪಕ್ಷ ಆರೋಗ್ಯಕರ ಟೀಕೆ ಟಿಪ್ಪಣಿ ಮಾಡಬೇಕು. ಸಮಸ್ಯೆಗಳು ಇವೆ, ಅವುಗಳ ಪರಿಹಾರ ಮಾಡಲು ಸರ್ಕಾರ ಕಣ್ತೆರೆದು ನೋಡಬೇಕಿದೆ. ಬೊಮ್ಮಾಯಿ ಸರ್ಕಾರ ಆ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಪೂರಕ ಬಜೆಟ್ ಮಂಡಿಸಲಾಗಿದೆ ಎಂದು ರಾಜ್ಯ ಬಜೆಟ್ ಅನ್ನು ಸ್ವಾಗತಿಸಿದರು.
ಎಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಾವು ಎಷ್ಟು ವರ್ಷ ಅಧಿಕಾರದಲ್ಲಿದ್ದೇವೆ ಎಂದು ನೋಡಿಕೊಂಡು ಮಾತನಾಡಿ. ವಾಜಪೇಯಿ ಕಾಲದಲ್ಲಿ ದೇಶ ಸಂಕಷ್ಟದಲ್ಲಿದ್ದಾಗ ಇಂದಿರಾಗಾಂಧಿಯನ್ನ ದೇಶದ ದುರ್ಗೆ ಎಂದಿದ್ದರು. ಅಂದು ವಿರೋಧ ಮಾಡಬೇಕಿದ್ದರೆ ಅವರು ಯಾಕೆ ಆಡಳಿತ ಪಕ್ಷವನ್ನು ಹೊಗಳಬೇಕಿತ್ತು. ದೇಶದ ಬಗ್ಗೆ ಯೋಚನೆ ಮಾಡುವಾಗ ಸಹಕಾರ ಕೊಡುವ ವ್ಯವಸ್ಥೆ ನಮ್ಮಲ್ಲಿದೆ. ಕೇವಲ ನಾಗಪುರ, ಭಗವಾಧ್ವಜ ಟೀಕೆ ಮಾಡಬಾರದು. ಇದೇನು ಪಾಕಿಸ್ತಾನವೆ? ದೇಶದ ಬಗ್ಗೆ ಯೋಜನೆ ಮಾಡುವಾಗ ಮೋದಿ ಟೀಕೆ ಸರಿಯೇ? ಎಂದು ಪ್ರಶ್ನಿಸಿದರು.
ದೇಶಕ್ಕೆ ಸುಗ್ಗಿಕಾಲ ಬಂದಿದೆ..ದೇಶಕ್ಕೆ ಈಗ ರಾಹುಕಾಲ ಬಂದಿದೆ ಎಂದು ಟೀಕಿಸಿದ್ದಾರೆ. ಆದರೆ, ರಾಹುಕಾಲ ಬಂದಿರುವುದು ದೇಶಕ್ಕಲ್ಲ, ಮೋದಿ ಟೀಕೆ ಮಾಡಿ ಮಾತನಾಡುವವರಿಗೆ ಮಾತ್ರ. ದೇಶಕ್ಕೆ ಸುಗ್ಗಿಕಾಲ ಬಂದಿದೆ. ಇದಕ್ಕೆ ಪಂಚ ರಾಜ್ಯದ ಫಲಿತಾಂಶವೇ ಸಾಕ್ಷಿ. ಕಳೆದ 60 ವರ್ಷಗಳ ಕಾಲ ರಾಹುಕಾಲ ಇತ್ತು. ಈಗ ಸುಗ್ಗಿಕಾಲ ಬಂದಿದೆ. ಹಿಂದೆ ಬರೀ ಘೋಷಣೆಗಳನ್ನು ಮಾಡುತ್ತಿದ್ದರು. ಈಗ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು.