ಬೆಂಗಳೂರು :ಬಿಜೆಪಿ ತನ್ನ ಹೆಸರನ್ನು ಭಾರತೀಯ ಜನತಾ ಪಕ್ಷದಿಂದ, ಭ್ರಷ್ಟ ಜನತಾ ಪಕ್ಷ ಎಂದು ಮರುನಾಮಕರಣ ಮಾಡಿಕೊಳ್ಳಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೊಮ್ಮಾಯಿ ಅವರ ಸರ್ಕಾರವನ್ನು ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಎಂದು ಕರೆಯಬೇಕು. ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲೇ ಭ್ರಷ್ಟಾಚಾರದ ಮಾದರಿ ನೀಡಿದೆ. ಈ ಸರ್ಕಾರವನ್ನು ಶೇ 40ರಷ್ಟು ಸರ್ಕಾರ, ಇಲ್ಲಿನ ಮುಖ್ಯಮಂತ್ರಿಯನ್ನು ಪೇಸಿಎಂ ಎಂದು ಕರೆಯುತ್ತಾರೆ. ಈ ಮಾತನ್ನು ನಾವು ಮಾತ್ರ ಹೇಳುತ್ತಿಲ್ಲ. ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಈ ಸರ್ಕಾರದಲ್ಲಿ ಕಮಿಷನ್ ನೀಡದೇ ಏನು ನಡೆಯುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ:ಈ ಬಿಜೆಪಿ ಸರ್ಕಾರ ಕೇವಲ ಲಂಚದ ಸಿದ್ಧಾಂತವನ್ನು ಹೊಂದಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾದರೂ ಆತ ತಾನು ಮಾಡಿದ ಕೆಲಸಕ್ಕೆ ಬಿಲ್ ಕೇಳಿದಾಗ ಶೇ 40ರಷ್ಟು ಲಂಚ ಕೇಳಿದರು. ಅದನ್ನು ನೀಡಲಾಗದೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಂತೋಷ್ ಪಾಟೀಲ್ ಅವರ ಮನೆಗೆ ಹೋದಾಗ ಅವರು ಬಿಜೆಪಿ ಸದಸ್ಯನಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದವನಿಂದಲೇ ಬಿಜೆಪಿ ಸರ್ಕಾರ ಲಂಚ ಕೇಳಿ ಅವರ ಪ್ರಾಣ ಬಲಿ ಪಡೆದಿದೆ ಎಂದು ಹೇಳಿದರು.
ನಾಲ್ಕು ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ್ದರು. ಆದರೆ, ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಲಿಲ್ಲ. ಬಿಜೆಪಿ ತನ್ನದೇ ಕಾರ್ಯಕರ್ತನನ್ನು ಬಿಡಲಿಲ್ಲ, ಇನ್ನು ಬೇರೆಯವರನ್ನು ಬಿಡುತ್ತಾರಾ? ಇನ್ನು ಬೆಂಗಳೂರಿನ ಗುತ್ತಿಗೆದಾರ ಪ್ರಶಾಂತ್, ತುಮಕೂರಿನಲ್ಲಿ ಗುತ್ತಿಗೆದಾರ ರಾಜೇಂದ್ರ ಅವರು ಲಂಚ ನೀಡಲಾಗದೇ ಪ್ರಾಣ ಬಿಟ್ಟಿದ್ದಾರೆ. ಈ 40ರಷ್ಟು ಸರ್ಕಾರದ ಬಗ್ಗೆ ಈ ಪರಿವಾರದವರನ್ನು ಕೇಳಬೇಕು. ಬೊಮ್ಮಾಯಿ ಅವರೇ, ಕಟೀಲ್ ಅವರೇ, ನಡ್ಡಾ ಅವರೇ, ಅಮಿತ್ ಶಾ ಅವರೇ, ನಿಮ್ಮ ಧನದಾಹ ಯಾವಾಗ ನೀಗಲಿದೆ? ಎಂದು ಹೇಳಿ. ಬೆಂಗಳೂರಿನ ಜನರೆಲ್ಲಾ ಸೇರಿ ಆ ಹಣವನ್ನು ಸಂಗ್ರಹಿಸಿ ನೀಡುತ್ತೇವೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ :ನೀವು ಸಂತೋಷ್ ಪಾಟೀಲ್, ಪ್ರಶಾಂತ್, ರಾಜೇಂದ್ರ ಅವರನ್ನು ಅವರ ಕುಟುಂಬದವರಿಗೆ ವಾಪಸ್ ನೀಡಿ. ಈ 40ರಷ್ಟು ಕಮಿಷನ್ ಬಗ್ಗೆ ತಿಳಿಯಬೇಕಾದರೆ ಶಾಲಾ ಒಕ್ಕೂಟ ರೂಪ್ಸಾ ಸಂಸ್ಥೆಯನ್ನು ಕೇಳಿ. ಪ್ರಧಾನಮಂತ್ರಿಗಳು ರಾಜ್ಯಕ್ಕೆ 8 ಬಾರಿ ಆಗಮಿಸಿದ್ದು, ಇದುವರೆಗೂ ಕೆಂಪಣ್ಣ ಅವರ ಪತ್ರಕ್ಕೆ ಉತ್ತರ ನೀಡಿಲ್ಲ. ಈ ಸರ್ಕಾರದ ಕಮಿಷನ್ ಬಗ್ಗೆ ಮಠಾಧೀಶರು 30ರಷ್ಟು ಕಮಿಷನ್ ನೀಡಬೇಕು ಎಂದಿದ್ದಾರೆ. ಕೆಂಪಣ್ಣ ಅವರು ತುಮಕೂರಿನ ಬಿಜೆಪಿ ಶಾಸಕರ ಅಕ್ರಮದ ಬಗ್ಗೆ ಆಡಿಯೋ ದಾಖಲೆ ಬಿಡುಗಡೆ ಮಾಡಿದರು. 90 ಲಕ್ಷ ಲಂಚ ಪಡೆದ ಬಗ್ಗೆ ಮಾಹಿತಿ ನೀಡಿದರು. ಅವರ ವಿರುದ್ಧ ಯಾವ ಕ್ರಮ ಕೈಗೊಂಡರು? ಈ ಸರ್ಕಾರದ 8 ಸಚಿವರ ವಿರುದ್ಧ ದಾಖಲೆ ಇವೆ. ಎಲ್ಲರೂ ಸೇರಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.