ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಹಾಗೂ ರಾಜ್ಯದ ರೈತರಿಗೆ ಪರಿಹಾರ ಘೋಷಿಸುವಂತೆ ಆಗ್ರಹಿಸಿ ಇಂದು ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಕೈಗೊಂಡಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಬೆಂಗಳೂರಲ್ಲಿ ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆಯಿದೆ.
ನಗರದ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಟ್ಟಿದೆ. ಸುಮಾರು 300 ರಿಂದ 400 ಪೊಲೀಸ್ ಸಿಬ್ಬಂದಿ, 3ಕ್ಕೂ ಹೆಚ್ಚು ಕೆ.ಎಸ್.ಆರ್.ಪಿ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರನ್ನು ಸಹ ನಿಯೋಜಿಸುವ ಮೂಲಕ ಪ್ರತಿಭಟನಕಾರರಿಗೆ ಮತ್ತು ವಾಹನ ಸವಾರರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಪೊಲೀಸ್ ಬಂದೋಬಸ್ತ್:ಕಾವೇರಿ ನೀರಿಗಾಗಿ ಪ್ರತಿಭಟನೆಯ ಕಾವು ಹೆಚ್ಚಾದ ಬೆನ್ನಲ್ಲೇ ತಮಿಳುನಾಡಿನ ಬಸ್ಗಳಿಗೆ ಭದ್ರತೆ ವಹಿಸಲಾಗಿದೆ. ಕರ್ನಾಟಕ-ತಮಿಳುನಾಡು ಗಡಿ ಭಾಗಗಳಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು ಅತ್ತಿಬೆಲೆ, ಹೊಸೂರು ರಸ್ತೆ ಭಾಗದಲ್ಲಿ ಭದ್ರತೆ ಹೆಚ್ಚುಸಲಾಗಿದೆ. ಅಲ್ಲದೇ ತಮಿಳುನಾಡು ಬಸ್ಗಳು ತಂಗುವ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಪಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ.