ಬೆಂಗಳೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳು ಹಾಗೂ ಜೆಡಿಎಸ್ನ ಪಂಚರತ್ನ ಭರವಸೆಗಳ ನಡುವೆ ಆಡಳಿತಾರೂಢ ಬಿಜೆಪಿ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದೆ. ಹತ್ತು ಹಲವು ಸಭೆ ನಡೆಸಿ ಸಲಹೆ ಪಡೆದು ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಯಾವ ರೀತಿ ಭರವಸೆ ಸಿಗಲಿದೆ ಎನ್ನುವುದು ಬಹಿರಂಗವಾಗಲಿದೆ. ರಾಜ್ಯ ವಿಧಾನಸಭಾ ಚುನಾವಣಾ ಮತದಾನಕ್ಕೆ 10 ದಿನಗಳು ಮಾತ್ರ ಬಾಕಿ ಇದ್ದು, ಬೆಳಗ್ಗೆ 10 ಗಂಟೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ಐದು ಗ್ಯಾರಂಟಿಗಳ ಮೂಲಕ ಬಹುತೇಕ ಪ್ರಣಾಳಿಕೆಯ ಅಂಶವನ್ನು ಬಹಿರಂಗಗೊಳಿಸಿದೆ. ಹಾಗೆಯೇ ಪಂಚರತ್ನ ಯೋಜನೆಗಳ ಪ್ರಣಾಳಿಕೆಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಹಾಗಾಗಿ ಬಿಜೆಪಿ ಪ್ರಣಾಳಿಕೆ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಪ್ರಣಾಳಿಕೆ ಸಿದ್ಧಪಡಿಸಲು ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದ ಸಮಿತಿ ರಚಿಸಿದ್ದು, ವಿವಿಧ ವಲಯಗಳ ನಿರೀಕ್ಷೆಗಳು ಅಗತ್ಯತೆಗಳ ಕುರಿತು ವಲಯವಾರು ತಜ್ಞರ ಜೊತೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಿ ತಜ್ಞರ ಸಲಹೆ ಪಡೆದುಕೊಳ್ಳಲಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಡಾ.ಸುಧಾಕರ್, ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ಸಚಿವ ಬಿ.ಸಿ ನಾಗೇಶ್, ಭಗವಂತ ಖೂಬಾ ಸೇರಿದಂತೆ ಹಲವರು ಇದ್ದಾರೆ. ಎಲ್ಲರೂ ಸೇರಿ ಸಭೆ ಮಾಡಿದ್ದೇವೆ. ಪ್ರಣಾಳಿಕೆಗೆ ಅಭಿಪ್ರಾಯ ಸಂಗ್ರಹ ಮಾಡಿ, ಎಲ್ಲರ ಸಲಹೆ ಪಡೆದಿದ್ದೇವೆ. ವಿಭಾಗ, ಜಿಲ್ಲೆ, ತಾಲೂಕುವಾರು ಪಟ್ಟಿ ಮಾಡಿದ್ದೇವೆ. ಈ ಬಾರಿ ನಮ್ಮ ಸರ್ಕಾರ ಬಂದರೆ ಏನು ಮಾಡಬಹುದು ಅಂತ ಪ್ರಣಾಳಿಕೆಯಲ್ಲಿ ಹೇಳಲಿದ್ದೇವೆ ಎಂದರು.
ನಮ್ಮ ಕಮಿಟಿಯಲ್ಲಿ ಸಾಕಷ್ಟು ಎಕ್ಸ್‌ಪರ್ಟ್ಸ್ ಇದ್ದಾರೆ. ಕರ್ನಾಟಕ ರಾಜ್ಯಕ್ಕೆ ನಮ್ಮ ಪ್ರಣಾಳಿಕೆ ಮಾದರಿಯಾಗಲಿದೆ, ದೇಶಕ್ಕೂ ಮಾದರಿಯಾಗಲಿದೆ. ಹೊಸತನ, ಬದುಕು ಕಟ್ಟಿಕೊಡುವ ರೀತಿ ಪ್ರಣಾಳಿಕೆ ಇರಲಿದೆ. ಅಂಗೈಯಲ್ಲಿ ಚಂದ್ರ ತೋರಿಸುವ ಕೆಲಸವಂತೂ ಮಾಡಲ್ಲ. ನಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪ್ರಣಾಳಿಕೆ ಇರಲಿದೆ. ರಾಮರಾಜ್ಯ ನಿರ್ಮಾಣ ಪರಿಕಲ್ಪನೆ ಅಡಿಯಲ್ಲಿ ರಾಜ್ಯ ನಿರ್ಮಾಣಕ್ಕೆ ಪೂರಕವಾಗಿ ನಮ್ಮ ಪ್ರಣಾಳಿಕೆ ಇರಲಿದೆ. ಗ್ರೇಟರ್ ಬೆಂಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬಯಲು ಸೀಮೆ ಹೀಗೆ ವಲಯವಾರು ಪ್ರಣಾಳಿಕೆ ಮಾಡಿದ್ದೇವೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಇದನ್ನೂ ಓದಿ:ನಾಳೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ತೀರ್ಮಾನ: ಬಿಎಸ್ವೈ