ಬೆಂಗಳೂರು :ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಅಬ್ಬರದ ಪ್ರಚಾರ ನಡೆಸಿ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನ ಸೋಲಿಸುತ್ತವೆ. ಆದರೆ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ನಿಲ್ಲಿಸದೆ ಜೆಡಿಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಪರಾಭವಗೊಳಿಸಿ ಗೆಲುವಿನ ಸಂಭ್ರಮ ಆಚರಿಸುತ್ತಿದೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ನಿಖಿಲ್ ಕುಮಾರಸ್ವಾಮಿ ಸೋಲಿಸಲು ತಂತ್ರಗಾರಿಕೆಯನ್ನು ಬಿಜೆಪಿ ಹೆಣೆದಿತ್ತು. ಅಭ್ಯರ್ಥಿ ನಿಲ್ಲಿಸಿದರೆ ಅದು ಜೆಡಿಎಸ್ ಗೆಲುವಿಗೆ ಸಹಕಾರಿಯಾಗುತ್ತೆ ಎಂದು ಲೆಕ್ಕಾಚಾರ ಹಾಕಿದ ಪಕ್ಷದ ವರಿಷ್ಠರು, ಸ್ಪರ್ಧೆ ಮಾಡದೇ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡಿ ನಿಖಿಲ್ ಸೋಲಲು ತಮ್ಮದೇ ಕಾಣಿಕೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸುವಂತೆ ಬಿಜೆಪಿ ವರಿಷ್ಠರ ಮೇಲೆ ಜೆಡಿಎಸ್ ಹೈಕಮಾಂಡ್ ಒತ್ತಡವನ್ನೂ ಹಾಕಿತ್ತು. ಈ ಬೆಳವಣಿಗೆ ನಡುವೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸಹ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲಿಸುವಂತೆಯೂ ಕೋರಿದ್ದರು.
ಬಿಜೆಪಿಗೆ ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸಿದರೆ ಗೆಲ್ಲುವ ಭರವಸೆ ಇರಲಿಲ್ಲ. ಪಕ್ಷದಿಂದ ಸ್ಪರ್ಧೆ ಮಾಡಿದರೆ ಮತಗಳು ವಿಭಜನೆಗೊಂಡು ನಿಖಿಲ್ ಗೆಲುವಿಗೆ ಸಹಕಾರಿ ಆಗಲಿದೆ ಎಂದು ರಾಜಕೀಯ ಲೆಕ್ಕಾಚಾರ ಹಾಕಿ ಅಭ್ಯರ್ಥಿ ನಿಲ್ಲಿಸುವುದು ಬೇಡವೆಂದು ವರಿಷ್ಠ ಮಂಡಳಿಗೆ ಶಿಫಾರಸು ಮಾಡಲಾಗಿತ್ತಂತೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಿಜೆಪಿ ಹೈಕಮಾಂಡ್ ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸುವುದಿಲ್ಲ. ಸುಮಲತಾಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು.
ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಮಂಡ್ಯದಲ್ಲಿ 2 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ನ ಮತಗಳು ವಿಭಜನೆಯಾಗುವುದಿಲ್ಲ. ಬಿಜೆಪಿ ಅಭ್ಯರ್ಥಿ ನಿಂತರೆ ಸುಮಲತಾಗೆ ಬೀಳುವ ಮತಗಳು ಬಿಜೆಪಿಗೆ ವಿಂಗಡಣೆಯಾಗಿ ನಿಖಿಲ್ ಸುಲಭವಾಗಿ ಗೆಲ್ಲಬಹುದು ಎನ್ನುವುದು ಜೆಡಿಎಸ್ ಲೆಕ್ಕಾಚಾರವಾಗಿತ್ತು. ಹಾಗಾಗಿ ಅಭ್ಯರ್ಥಿ ನಿಲ್ಲಿಸುವಂತೆ ಜೆಡಿಎಸ್ ಬಿಜೆಪಿ ಮೇಲೆ ಒತ್ತಡ ಹಾಕಿತ್ತು ಎನ್ನಲಾಗಿದೆ. ಇದರ ಒಳ ಮರ್ಮ ಅರಿತ ಬಿಜೆಪಿ ಅಭ್ಯರ್ಥಿ ನಿಲ್ಲಿಸದೆ ಜೆಡಿಎಸ್ಗೆ ಸೋಲಿನ ರುಚಿ ತೋರಿಸುವ ಪ್ಲಾನ್ ಸಿದ್ಧಪಡಿಸಿತ್ತು.
ಅಭ್ಯರ್ಥಿ ಕಣಕ್ಕಿಳಿಸದ ಭಾರತೀಯ ಜನತಾ ಪಕ್ಷದ ರಾಜಕೀಯ ತಂತ್ರಗಾರಿಕೆ ಚುನಾವಣೆಯಲ್ಲಿ ಯಶಸ್ಸು ಕಂಡಿದೆ. ಬಿಜೆಪಿಯ ಮತಗಳು ಸುಮಲತಾಗೆ ವರ್ಗಾವಣೆ ಆದವು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸುಮಲತಾ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿಯನ್ನು ಮಣಿಸಿ ಸಂಸತ್ಗೆ ಪ್ರವೇಶ ಪಡೆದಿದ್ದಾರೆ. ಪ್ರಧಾನಿ ಮೋದಿ ಅವರು ಮೈಸೂರಿನಲ್ಲಿ ಚುನಾವಣೆ ಪ್ರಚಾರ ಮಾಡುವಾಗ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬಿಜೆಪಿ ಬೆಂಬಲ ಘೋಷಿಸಿದ್ದು, ಅವರಿಗೆ ಮತ ನೀಡುವಂತೆ ಮನವಿ ಮಾಡಿದ್ದರು. ಇದು ಸಹ ಜೆಡಿಎಸ್ ಅಭ್ಯರ್ಥಿ ಸೋಲಿಗೆ ಸ್ವಲ್ಪ ಕಾರಣವಾಯಿತು.